ಮಂಗಳವಾರ, ಅಕ್ಟೋಬರ್ 6, 2020

*ನಾಳೆ ಅಡುಗೆ ಏನು ಮಾಡುವುದು?

 *NEWSICS.COM SUNDAY SPECIAL*

04-10-2020 


*ಭಾವಲಹರಿ*


*ನಾಳೆ ಅಡುಗೆ ಏನು ಮಾಡುವುದು?!*




ನಾಳೆ ಅಡುಗೆ ಏನು ಮಾಡುವುದು?!


ಅಕ್ಕ ,ತಂಗಿ , ಇಬ್ಬರೂ ಬೇಸಿಗೆ ರಜೆಗೆಂದು ತಮ್ಮ ಮಕ್ಕಳ ಸೈನ್ಯವನ್ನು ಹೊರಡಿಸಿಕೊಂಡು ತಮ್ಮ ತವರು ಮನೆಗೆ ಬಂದು ಝಂಡಾ ಊರಿದ್ದರು. ತವರಿನಲ್ಲಿ ಗಂಡು ಮಕ್ಕಳಿಂದ ಬೇರೆಯಾಗಿ,ಆಸ್ತಿಯಲ್ಲಿ ತನ್ನ ಜೀವನ ನಿರ್ವಹಣೆಗೆ ಅಂತ ಸ್ವಲ್ಪ ಭಾಗ ತೆಗೆದುಕೊಂಡು, ಮನೆಯಲ್ಲೂ ಒಂದು ಭಾಗವನ್ನು ಬಿಡಿಸಿಕೊಂಡು ವಾಸಿಸುತ್ತಿದ್ದ ಅವ್ವನ ಜೊತೆಗೇ ಬೇಸಿಗೆ ರಜೆ ಕಳೆಯುವ ಸಂಭ್ರಮ.


ರಜೆ ಮಕ್ಕಳಿಗೆ ಮಾತ್ರ ,ತಾಯಂದಿರಿಗೆ ಯಥಾ ಪ್ರಕಾರ ಇಲ್ಲೂ ಅದೇ ಬೇಯಿಸು, ತಿನ್ನಿಸು, ತೊಳಿ ,ಬಳಿಯುವ ಕೆಲಸಗಳೇ.ಅದಲ್ಲದೆ ನಗರದ ತಮ್ಮ ಮನೆಯಲ್ಲಿ ಇದ್ದ ಗ್ಯಾಸ್ ಒಲೆ, ಮಿಕ್ಸಿ, ಕುಕ್ಕರ್ ಸೌಕರ್ಯಗಳ ಸುಖ ಇಲ್ಲಿ ಹಳ್ಳಿಯ ಅವ್ವನ ಮನೆಯಲ್ಲಿ ಇಲ್ಲದೆ, ಸೌದೆ ಒಲೆ, ಒಳಕಲ್ಲು ಬಳಸ ಬೇಕಾಗಿ ಬಂದರೂ ಅದೇ ಇನ್ನೊಂದು ತರಹದ ಸುಖ.


ಅಕ್ಕ ತಂಗಿ ದಿನಾ ಅವ್ವನೊಂದಿಗೆ ಹರಟುತ್ತಾ, ಅಡಿಗೆ ಮಾಡುತ್ತಾ, ಬಿಡುವು ಸಿಕ್ಕಾಗ ನೆಂಟರ ಮನೆ ಸುತ್ತುತ್ತಾ, ಮಕ್ಕಳನ್ನು ಅವರ ಪಾಡಿಗೆ ಅವರನ್ನು ತೋಟ ಗದ್ದೆ ಸುತ್ತಲು ಬಿಟ್ಟು, ತಮ್ಮದೇ ಆದ ರಜೆಯ ಸಡಗರ ಅವರಿಗೆ. ಮಾತು ಆಡಿದಷ್ಟೂ ಮುಗಿಯದು, ಬಟ್ಟೆ ಒಗೆಯುವಾಗ,ಪಾತ್ರೆ ತೊಳೆಯುವಾಗಾ,ತೋಟದ ಬಾವಿಯಿಂದ ಮನೆಗೆ ನೀರು ಹೊರುವಾಗ, ಯಾವಾಗ ನೋಡಿದರೂ ಮಾತೇ.


"ಮಾತಾಡಿ ಆಡಿ ಆ ಹಾಳು ಬಾಯಿಗೆ ನೋವಾದರೂ ಬರೋದಿಲ್ವ" ಅಂತ ಅವರವ್ವ ಆಡಿಕೊಂಡು ನಗಾಡಿದರೂ ಇವರ ಮಾತು ನಿಲ್ಲುತ್ತಿದ್ದದ್ದು ರಾತ್ರಿ ಉಂಡು ಮಲಗಿದಾಗಲೆ.


                ಹೀಗಿದ್ದಾಗಲೇ ಒಂದು ದಿನ ಸಂಜೆ ಇಬ್ಬರೂ ಮಾರನೇ ದಿನದ ಬೆಳಗಿನ ತಿಂಡಿಗೆ ದೋಸೆಗೆ ಅಂತ ನೆನೆಸಿದ್ದ ಅಕ್ಕಿ ,ಉದ್ದು ರುಬ್ಬಲು ಕೂತರು. ಅಕ್ಕ ಗುಂಡುಕಲ್ಲು ಹಿಡಿದು ಆಡಿಸಿದರೆ ತಂಗಿ ಹಿಟ್ಟು ತಳ್ಳಲು ಕೂತಳು. ಗುಂಡು ತಿರುಗಿದಂತೆ ಇವರ ಮಾತೂ ತಿರುಗಿ ತಿರುಗಿ ಊರೆಲ್ಲ ಸುತ್ತು ಹೊಡೆಯುತ್ತಿತ್ತು. 


ಹಾಗೇ ಮಾತನಾಡುತ್ತ ತಂಗಿಗೆ ಏನೋ ಹೊಳೆದು "ಅಲ್ಲಾ ಕಣಕ್ಕ, ನಾಳೆ ಬೆಳಿಗ್ಗೆ ತಿಂಡಿಗೆ ಎನ್ ಮಾಡೋದು" ಅಂತ ಕೇಳಿದ್ದಕ್ಕೆ, ಅವರಕ್ಕ "ಅಯ್ಯೋ, ಏನೋ ಒಂದು ಮಾಡಿದ್ರಾಯ್ತು ಬುಡೇ, ದಿನಾ ಏನ್ ಬೇಯಿಸೋದು ಅಂತ ಯೋಚ್ನೆ ಮಾಡ್ತಾನೆ ಕಳದೊಯ್ತದೆ," ಅಂತ ನಿಟ್ಟುಸಿರು ಬಿಟ್ಟು ಮತ್ತೆ ಇಬ್ಬರೂ ಹಿಟ್ಟು ರುಬ್ಬೋದು ಮುಂದುವರೆಸಿದರು. 


ಕೇಳುತ್ತಾ ಇದ್ದ ಅವ್ವನಿಗೆ ನಗೆ ತಡೆಯಲಾರದೆ"ಅಲ್ಲಾ ಕಣ್ರೋ, ಈ ಹಿಟ್ಟ ಆಡುಸ್ತ ಇರೋದು ಯಾಕೆ, ನಿಮ್ ಮೈ ಮೇಲೆ ಹುಯ್ಕೊಳ್ಳಕಾ" ಅಂತ ನಗಾಡಿದಾಗ ಅಕ್ಕ ತಂಗಿಯರ ಟ್ಯೂಬ್ ಲೈಟ್ ಝಗ್ ಅಂತ ಹೊತ್ತಿಕೊಂಡಿತು.


ಇದು ನಮ್ಮಮ್ಮ ಹಾಗೂ ಚಿಕ್ಕಮ್ಮ ಯಾವಾಗಲೂ ನೆನೆದು ನಗುತ್ತಿದ್ದ ವಿಷಯ. ಅಂದಿಗೂ ಇಂದಿಗೂ ಎಂದಿಗೂ ಹೆಂಗಳೆಯರ ಎಂದೂ ಬಗೆ ಹರಿಯದ ಯಕ್ಷ ಪ್ರಶ್ನೆ ಎಂದರೆ, " ನಾಳೆ ಅಡುಗೆ ಏನು ಮಾಡೋದು?"


         ಆ ಧರ್ಮರಾಯ ಆ ಯಕ್ಷನ ಪ್ರಶ್ನೆ ಗಳನ್ನೇನೋ ಸುಲಭವಾಗಿ ಉತ್ತರಿಸಿಬಿಟ್ಟ. ಅದರ ಬದಲಿಗೆ ಅವನು ಭೀಮನ ಜಾಗದಲ್ಲಿ ವಿರಾಟರಾಯನ ಅರಮನೆಯಲ್ಲಿ ಅಡುಗೆ ಮಾಡಿದ್ದಿದ್ದರೆ ಗೊತ್ತಾಗುತ್ತಿತ್ತು ನಿಜವಾದ ಜಾಣ ಭೀಮನೋ ಇವನೋ ಅಂತ . ತಮಾಷೆಯೇನೆ ಇರಲಿ,

ಅಂತಹ ಯಕ್ಷ ಪ್ರಶ್ನೆಗಳಿಗಿಂತ ಕಠಿಣ "ಅಡುಗೆ ಏನು ಮಾಡೋದು? " ಅನ್ನೋ ಕಗ್ಗಂಟನ್ನು ಸಾವಿರಾರು ವರ್ಷಗಳಿಂದ ಬಿಡಿಸುತ್ತಾ ಬಂದಿರುವ ನಮ್ಮ ವೀರ ನಾರಿಯರಿಗಿಂತ ಚಾಣಾಕ್ಷರು ಯಾರಿದ್ದಾರೆ?


ಅಡುಗೆ ಮಾಡೋದು ಸುಲಭವೇ ಬಿಡಿ.ಆದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸುವುದು, ಮುಂಚಿತವಾಗಿ ಪ್ಲಾನ್ ಮಾಡೋದು, ಅಡುಗೆ ಮನೆಯಲ್ಲಿ ಏನಿದೆ, ಏನಿಲ್ಲ ,ಅಂತ ನೆನಪಿನಲ್ಲಿ ಇಟ್ಟು ಕೊಂಡಿರೋದು, ಇವುಗಳಿಗಿಂತ ತಲೆ ಬಿಸಿ ಇನ್ನೊಂದೆಲ್ಲಿ?ಅದರಲ್ಲೂ ಈರುಳ್ಳಿ,ಟೊಮ್ಯಾಟೋ ಗಳ ಬೆಲೆ ಗಗನಕ್ಕೇರುವ ದಿನಗಳಲ್ಲಿ ತಲೆ ಕೆಟ್ಟು ಗೊಬ್ಬರವಾಗುತ್ತದೆ.ಈರುಳ್ಳಿ ಟೊಮ್ಯಾಟೋಗಳು ನಮ್ಮ ಭಾರತೀಯ ಅಡುಗೆಗಳನ್ನು ಎಷ್ಟರ ಮಟ್ಟಿಗೆ ಆವರಿಸಿ ಕೊಂಡು ಬಿಟ್ಟಿವೆ ಎಂದರೆ,ಅವುಗಳಿರದೆ ಯಾರ ಮನೆಯ ಅಡಿಗೆಯೂ ಪರಿಪೂರ್ಣವಲ್ಲ ಬಿಡಿ.ಬೆಲೆ ಕಮ್ಮಿ ಇದ್ದಾಗ ಕೆಜಿ ಗಟ್ಟಲೆ ಬಳಸಿ,ಹೆಚ್ಚಾದಾಗ ಗ್ರಾಮ್ ಗಳ ಲೆಕ್ಕದಲ್ಲಿ ಬಳಸಿ ರುಚಿಯಲ್ಲಿ ಆಗುವ ವ್ಯತ್ಯಾಸಗಳಿಗೆ ಮಕ್ಕಳನ್ನು ಹೊಂದಿಸುವಷ್ಟರಲ್ಲಿ

ಸಾಕು ಸಾಕಾಗುತ್ತದೆ.


ಅಡುಗೆ ಪ್ಲಾನ್ ಮಾಡುವಾಗ ಏನೋ ಒಂದು ಮಾಡಿದರಾಯಿತು ಅಂತ ಅಂದು ಕೊಳ್ಳಲಿಕ್ಕೆ ಸಾದ್ಯವೇ ಇಲ್ಲ. ಮನೆಯಲ್ಲಿ ಇರೋ ಅಷ್ಟೂ ಜನರ ರುಚಿ ಅಭಿರುಚಿ ಗೊತ್ತಿರಬೇಕು, ಮನೆಯ ಆರ್ಥಿಕ ಸ್ಥಿತಿ ಗೆ ತಕ್ಕಂಥ ಸಾಮಗ್ರಿ ಖರೀದಿಸುವ ಚಾಕ ಚಕ್ಯತೆ ಬೇಕು, ಬೇರೆ ಬೇರೆ ಸಮಯಕ್ಕೆ ಶಾಲೆ ಕಾಲೇಜು ಎಂದು, ಕೆಲಸಕ್ಕೆ ಎಂದು ಹೊರಡುವವರ ಸಮಯಕ್ಕೆ ಸರಿಯಾಗಿ ತಯಾರು ಮಾಡಲು ಸಾಧ್ಯವಾ ಎಂದು ಯೋಚಿಸಬೇಕು. ಇನ್ನು ಶುಗರ್ರು.ಬಿಪಿ,ಗ್ಯಾಸ್ಟ್ರಿಕ್ ಎಂದು ನರಳುವವರು ಮನೆಯಲ್ಲಿ ಇದ್ದರೆ ಅವರಿಗೇನು ಮೆನು ಅಂತ ಬೇರೆ ಪಾಡು ಹತ್ತಬೇಕು.


        ಸರಿ ಅಡುಗೆ ಪ್ಲಾನ್ ಮಾಡಿಯೇನೊ ಆಯಿತು. ಈಗ ಕಾರ್ಯ ರೂಪಕ್ಕೆ ಇಳಿಸುವಾಗ ಅಚಾನಕ್ ಎಂದು ಎದುರಾಗುವ ಕಿತಾಪತಿಗಳ ಕಾಟ ಹೇಳಲಿಕ್ಕಾಗದು.

ನನಗೆ ಎಷ್ಟೊಂದು ಬಾರಿ ವಗ್ಗರಣೆಗೆ ಎಣ್ಣೆ ಕಾಯಲು ಇಟ್ಟಾಗಲೆ ಸಾಸಿವೆ ಖಾಲಿಯಾಗಿದೆ ಅಂತ ಹೊಳೆಯುವುದು. ಈರುಳ್ಳಿ ಹೆಚ್ಚುವಾಗಲೇ ಮುಗಿದುಹೋದ ಹಸಿಮೆಣಸು ಕಣ್ಣಲ್ಲಿ ನೀರು ತರುವುದು. ರಾತ್ರಿ ಒಂಬತ್ತೂವರೆಗೆ ಸಾರಿಗೆ ವಗ್ಗರಣೆ ಹಾಕಿ, ಉಪ್ಪಿನ ಜಾಡಿಗೆ ಕೈ ಹಾಕಿದಾಗ ತೀರಿ ಹೋಗಿರುವ ಉಪ್ಪಿನ ಅಳತೆ ಸಿಗುವುದು.


ನನ್ನ ಗಂಡ ಗೊಣಗುತ್ತಲೇ " ನಿಮ್ಮವ್ವ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜನ" ಎನ್ನುತ್ತಾ ಹೊತ್ತಲ್ಲದ ಹೊತ್ತಲ್ಲಿ ಅಂಗಡಿಗಳಿಗೆ ಹೋಗಿದ್ದು ಇದೆ.ಎಷ್ಟೋ ಬಾರಿ ಮಾಡಿರೋ ತಯಾರಿ ಫ್ರಿಡ್ಜ್ ನಲ್ಲೇ ಬಾಕಿಯಾಗಿ ಬೇರೆ ಇನ್ನೇನೋ ಮಾಡಿದ್ದೂ ಇದೆ.ಅಡುಗೆ ಎಲ್ಲಾ ಆದ ಬಳಿಕ ಫ್ರಿಡ್ಜ್ ತೆಗೆದಾಗ ಹೆಚ್ಚಿಟ್ಟ ತರಕಾರಿಗಳು ಅಣಕಿಸಿದಾಗಲೆ ನನ್ನ ಬುರುಡೆಗೆ ಆಗಿರುವ ಪ್ರಮಾದದ, ಅರಿವಾಗುವುದು.


ಆದರೆ ಇದೇನು ನನ್ನೊಬ್ಬಳದೆ ಸಮಸ್ಯೆ ಯಲ್ಲ ಬಿಡಿ. ಇಡೀ ಪ್ರಪಂಚದ ಮಹಿಳೆಯರನೆಲ್ಲಾ ಕಾಡುತ್ತಿರುವ ಏಕೈಕ ಪ್ರಶ್ನೆ " ನಾಳೆ.ಅಡುಗೆ ಏನು ಮಾಡುವುದು!?.


        ಇದು ಉದ್ಭವಿಸಲು ಹೊತ್ತು ಗೊತ್ತು ಏನೂ ಬೇಡ.

ಸಂಜೆ ವಾಕ್ ಮಾಡುತ್ತಿರುವ ಗೆಳತಿಯರು, ಬಸ್ನಲ್ಲಿ ಅಕ್ಕ ಪಕ್ಕ ಕುಳಿತು ಹರಟು ತ್ತಿರುವ ಮಹಿಳೆಯರು,ಸಿನೆಮಾ ಪಾರ್ಕ್ ಅಂತ ಸುತ್ತಲು ಹೋಗಿರುವ ಸ್ನೇಹಿತೆಯರು, ಕೆಲಸದ ಬಿಡುವಿನಲ್ಲಿ ಸ್ಟಾಫ್ ರೂಂ ನಲ್ಲಿ ಕಲೆ ಹಾಕಿಕೊಂಡಿರುವ ಮಹಿಳಾ ಸಹೋದ್ಯೋಗಿಗಳು, ಮಾರ್ಕೇಟ್ ಗೆ ಒಟ್ಟಿಗೆ ಹೊರಟ ಅಕ್ಕಪಕ್ಕದ ಮನೆಯ ಮಾನಿನಿಯರು,ಇತ್ಯಾದಿ ಹೆಂಗಸರ ಗುಂಪು ಕೂಡಿರುವ ಕಡೆ ಸುಮ್ಮನೆ ಕಿವಿಗೊಡಿ."ಇವತ್ತು ನಿಮ್ಮನೆ ಏನಡಿಗೆ?" ಇಲ್ಲವೇ "ರಾತ್ರಿ ಊಟಾಕ್ಕೇನು ಮಾಡ್ತೀರಾ?" ಇಂಥ ಪ್ರಶ್ನೆಗಳು ಖಂಡಿತ ಕಿವಿಗೆ ಬಿದ್ದೇ ಬೀಳುತ್ತವೆ.


ಇನ್ನೂ ಕೆಲವು ಬಾರಿ ಎದುರಾಗುವ ವೇಳೆ ,ಸರಿಯಾಗಿ ದಿನದ ರಾತ್ರಿ ಊಟ ಮುಗಿಸಿ,ಪಾತ್ರೆ ಎಲ್ಲ ಮುಚ್ಚಿಟ್ಟು, ಅಡುಗೆ ಮನೆ ಇನ್ನೇನು ದಾಟಬೇಕು ಅನ್ನುವಾಗ.


"ಬಿಡು ಬೆಳಿಗ್ಗೆಗೆ ಉಪ್ಪಿಟ್ಟು ಮಾಡಿದರಾಯಿತು" ಅನ್ನಿಸಿದ ಕ್ಷಣವೇ ಆ ಇಡೀ ವಾರ ಮಾಡಿರುವ ವಗ್ಗರಣೆ ತಿಂಡಿಗಳು ಕಣ್ಣೆದುರು ನಿಲ್ಲುತ್ತವೆ. ಮತ್ತೆ ಮಾರಣೆಗೂ ಅದೇ ಆದರೆ ಮಕ್ಕಳು ಮುಷ್ಕರ ಹೂಡುವ ಭಯ.


ದೋಸೆ ಇಡ್ಲಿ ಗೆ ಪ್ಲಾನ್ ಮಾಡೋಕೆ ಅಕ್ಕಿ ನೆನೆಸಲು ಆಗಲೇ ಲೇಟಾಗಿದೇ. ಇನ್ನು ಮನೆ ಜನಕ್ಕೆಲ್ಲ ಚಪಾತಿ,ರೊಟ್ಟಿ,ಪೂರಿ ಅಂತ ಲಟ್ಟಿಸುತ್ತ ಕೂರಲು ಸಮಯ ಕೆಲಸದ ದಿನಗಳಲ್ಲಿ ಇಲ್ಲವೇ ಇಲ್ಲ.ಅಂಥ ಸಮಯದಲ್ಲಿ ರಾತ್ರಿಯಿಡೀ ನಿದ್ದೆ ಬಂದರೆ ಹೇಳಿ.


             ಮನೆಯಕಡೆಸಾಕಷ್ಟುಅನುಕೂಲವಾಗಿರುವಾ,

ಜೊತೆಗೆ ಅವಳೂ ಒಳ್ಳೆಯ ಉದ್ಯೋಗದಲ್ಲಿರುವ ನನ್ನ ಗೆಳತಿಯೊಬ್ಬಳು ಇದೆಲ್ಲ ತಲೆಹರಟೆಯೇ ಬೇಡವೆಂದು ಮನೆಯಲ್ಲಿ ಅಡುಗೆಯವರೊಬ್ಬರನ್ನು ಇಟ್ಟು ಕೊಂಡು ಬಿಟ್ಟಿದ್ದಾಳೆ.ಮನೆಗೆ ಬೇಕಾದ ಅಡುಗೆ ಸಾಮಗ್ರಿ ,ತರಕಾರಿ ತಂದು ಕೊಟ್ಟು ಬಿಟ್ಟರೆ ಮುಗಿಯಿತು.ಜೊತೆಗೆ ಹದಿನೈದು ದಿನಗಳ ಅವಧಿಯಲ್ಲಿ ಪ್ರತಿದಿನ ಏನು ಅಡಿಗೆ ಮಾಡಬೇಕು ಅನ್ನುವ ಮೆನು ಚಾರ್ಟ್ ಅಡಿಗೆ ಮನೆಯಲ್ಲಿ ತೂಗು ಹಾಕಿ ಬಿಟ್ಟಿದ್ದಾಳೆ.ಪಾಕ್ಷಿಕವಾಗಿ ಈ ಮೆನು ಆವರ್ತ ಗೊಳ್ಳುತ್ತಿರಬೇಕು. ಅಷ್ಟು ಮಾಡಿ ತನ್ನ ಜವಾಬ್ದಾರಿ ಕಳೆದು ಕೊಂಡು ಬಿಟ್ಟಿದ್ದಾಳೆ. ಇನ್ನು ಬಾಕಿ ತಲೆನೋವು ಅಡುಗೆಯವರದು. ಎಷ್ಟು ಸುಲಭ ಪರಿಹಾರ ನೋಡಿ.ಆದರೆ ಅದು ಆರ್ಥಿಕವಾಗಿ ಅನುಕೂಲವಾಗಿರುವವರ ಸುಖ ಸೌಲಭ್ಯ. ಮಧ್ಯಮ ಕೆಳ ಮಧ್ಯಮ ವರ್ಗದವರಿಗೆ ಆ ಸೌಕರ್ಯ ಮಾಡಿಕೊಳ್ಳುವಷ್ಟು ಅನುಕೂಲ ಎಲ್ಲಿರುತ್ತದೆ ಹೇಳಿ.


     ಅವತ್ತು ದುಡಿದು ಅವತ್ತಿನ ಅಡುಗೆಗೆ ಹೊಂದಿಸ ಬೇಕಾಗಿರುವ ಬಡ ಹೆಂಗಸರ ಕಷ್ಟ ಅಷ್ಟಿಷ್ಟಲ್ಲ.ಗಂಡ ಕೂಡ ದುಡಿದು ಮನೆಗೆ ಕೊಟ್ಟರೆ ಪರವಾಗಿಲ್ಲ.ದುಡಿದು ಎಷ್ಟೇ ಸಾಕಾಗಿ ಮನೆಗೆ ಬಂದರೂ ಇರುವುದರಲ್ಲೇ ಹೊಂದಿಸಿ ಗಂಡ ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ಕುಡಿದು ಬಂದು ಹೊಡೆದು ಬಡಿದು ಸಂಪಾದನೆಯನ್ನು ಕಳೆಯುವವನಾದರೆ ಏನು ಮಾಡುವುದು.


ಗಂಡಸರಿಗೆ ಈ ತಲೆನೋವು ಇಲ್ಲವೇ ಇಲ್ಲ ಬಿಡಿ.ನನ್ನ ಗಂಡ ಓದುವ ಸಮಯದಲ್ಲಿ,ನಂತರ ಮದುವೆಗೆ ಮುಂಚೆ ಒಬ್ಬರೇ ರೂಂ ಮಾಡಿಕೊಂಡು ಇದ್ದಾಗ ,ಅವರು ಅಡಿಗೆ ಮಾಡಿಕೊಳ್ಳುತ್ತಿದ್ದು,ಅವರ ಮಾತಿನ ಪ್ರಕಾರವೇ

"ನಾನು ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ದಿನ ಬೆಳಿಗ್ಗೆ ತಿಂಡಿ ಹೋಟೆಲ್ ನಲ್ಲಿ,ಮದ್ಯಾಹ್ನ ಸಂಜೆಗೆ ದಿನಾ ಒಂದೇ ಅಡುಗೆ, ಅನ್ನ ಟೊಮ್ಯಾಟೋ ಸಾರು,ಮೊಟ್ಟೆ,ಭಾನುವಾರ ಬಂದರೆ ಒಂದು ಚಿಕನ್ ಗೊಜ್ಜು,ಅಷ್ಟೇ.ನಾನೇನು, ನನ್ನ ಎಷ್ಟೊಂದು ಗೆಳೆಯರೂ ಹಾಗೆ ಇದ್ದಿದ್ದು,ನೀವು ಹೆಂಗಸರಿಗೆ ಬುದ್ಧಿ ಇಲ್ಲ ಅಷ್ಟೇ" ಅಂತ ನಗಾಡುತ್ತಾರೆ.

ಹೇಳೋದೇನೋ ಸುಲಭ ಬಿಡಿ.ಮದುವೆ ನಂತರವೂ ಹೆಂಡತಿ ಅದೇ ರೀತಿಯಾಗಿ ಅಡುಗೆ ಮಾಡಿದರೆ ಈ ಗಂಡಸರು ಒಪ್ಪುವರೇನು! ವೈವಿಧ್ಯವಿಲ್ಲದಿದ್ದರೆ ಬರೀ ಅಡುಗೆಯೇನು, ಜೀವನವೇ ನೀರಸವಲ್ಲವೇ?ಹಾಗಾಗಿ ಹೆಂಗಸರು ಎಷ್ಟು ತಲೆನೋವಾದರೂ ತಮ್ಮ ವರೈಟೀ ವರೈಟಿ ಅಡುಗೆ ಬಿಡಲಾರರು.


ಭಾನುವಾರದ ಬಾಡೂಟ, ಹಬ್ಬ ಹರಿದಿನಗಳಲ್ಲಿ ಆಯಾ ಹಬ್ಬಕ್ಕೆ ತಕ್ಕ ಅಡುಗೆ ಮಾಡುವದಕ್ಕಾಗಿ ಹೊಂದಿಸಬೇಕಾದ ,ಸಾಮಗ್ರಿ ,ಸಮಯ ಎಲ್ಲಾ ಯೋಚಿಸಿ, ಎಲ್ಲವನ್ನೂ ನಮ್ಮ ಹೆಂಗಸರು ಹೇಗೋ ನಿಭಾಯಿಸಿ ಸೈ ಅನ್ನಿಸಿಕೊಂಡು ಬಿಡುತ್ತಾರೆ. ಇಷ್ಟೆಲ್ಲಾ ಶೇಕಡಾ ನೂರಕ್ಕೆ ನೂರರಷ್ಟು ದಕ್ಷತೆ, ಕ್ಷಮತೆಯಿಂದ ಕೆಲಸ ಮಾಡುವ ನಮ್ಮ ಸ್ತ್ರೀಯರು ಯಾವ ಬಹುರಾಷ್ಟ್ರೀಯ ಕಂಪನಿಯ ಸಿ ಇ ಓ ಗಿಂತಲೂ ಕಮ್ಮಿ ಇಲ್ಲ ಬಿಡಿ.


ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರ ವರೆಗೆ, ಹಳ್ಳಿಯಿಂದ ದಿಲ್ಲಿಯವರೆಗಿನ ಹೆಂಗಳೆಯರಿಗೆ, ಅತ್ತೆ ಸೊಸೆ, ತಾಯಿ ಮಗಳು, ಅಕ್ಕ ತಂಗಿ, ಅತ್ತಿಗೆ ನಾದಿನಿ ಓರಗಿತ್ತಿ, ದೊಡ್ಡಮ್ಮ ಚಿಕ್ಕಮ್ಮ ಯಾರನ್ನೂ ಇದು ಬಿಡದೆ ಕಾಡಿದೆ.


ಈಗೀಗ ಝೋಮ್ಯಟೋ, ಸ್ವಿಗ್ಗಿ, ಪಿಜ್ಜಾ ಡೆಲಿವರಿ ಅಂತೆಲ್ಲ ಇರುವಾಗ ಸ್ವಲ್ಪ ಕೆಲಸ ಸುಲಭವೇ.

ಆದರೆ "ಏನು ಆರ್ಡರ್ ಮಾಡುವುದು " ಅನ್ನುವುದು ಮುಂದಿನ ಯಕ್ಷಪ್ರಶ್ನೆ. ಒಟ್ಟಾರೆ. ಈ ಅಟ್ಟುವ ಉಣ್ಣುವ ಪ್ಲಾನ್ ನ ತಲೆಹರಟೆ ಈ ಯುಗದಲ್ಲಂತೂ ಬಗೆ ಹರಿಯುವುದಿಲ್ಲ ಬಿಡಿ.





- ಸಮತಾ ಆರ್.

https://newsics.com/literature/articles/essay-writing-by-samatha/34078/


*Facebook*

https://www.facebook.com/pg/newsi

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ

 ಉಪ್ಪಿನ ಕಾಯಿಗೆ ಒಂಚೂರು ಅನ್ನ..   "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...