ಶನಿವಾರ, ಆಗಸ್ಟ್ 15, 2020

ಮಂಗಳದಲ್ಲಿ ಪ್ರಕಟವಾಗಿರುವ ಪೆನ್ನು ಕಳ್ಳ ತನದ ಮಜಾ

 ಪೆನ್ನುಗಳ್ಳತನದ ಮಜಾ

ಇದೇನು ಸರಗಳ್ಳತನ ಕೇಳಿದ್ದೇವೆ,ಪೆನ್ನುಗಳ್ಳತನ ಕೂಡ ಇದೆಯೇ ಅಂತ ಬೆರಗಾಗಬೇಡಿ.ಇದೆ,ಅತ್ಯಂತ ದೊಡ್ಡ ಪ್ರಮಾಣದಲ್ಲೇ ಇದೆ.ನೋಡಬೇಕು ಅಂದರೆ ನಮ್ಮ ಶಾಲೆಗೆ ಒಂದು ದಿನ ನಿಮ್ಮ ಪೆನ್ನುಗಳ ಸಮೇತ ಭೇಟಿ ಕೊಟ್ಟು ನೋಡಿ, ಖಂಡಿತವಾಗಿಯೂ ನಿಮಗೆ ನಿರಾಶೆಯಾಗದಂತೆ, ನಿಮಗೇ ಗೊತ್ತಾಗದಂತೆ ನಿಮ್ಮ ಪೆನ್ನುಗಳ ಕದ್ದು ಕಳುಹಿಸಿ ಕೊಡುವುದು ನನ್ನ ಜವಾಬ್ದಾರಿ.
ಈಗ ಗೊತ್ತಾಯಿತೇ ಪ್ರಪಂಚದ ಅತಿ ದೊಡ್ಡ ಪೆನ್ನು ಕಳ್ಳಿ ಯಾರೂ ಅಂತ.ಅದೇನೋ ಕ್ಲೆಪ್ಟ್ಟೋ ಮೇನಿಯಾ ಅನ್ನೋ ಕದಿಯಬೇಕು ಅನ್ನಿಸುವಂತೆ ಮಾಡುವ ಮಾನಸಿಕ ಕಾಯಿಲೆ ಇದೆಯಂತೆ.ಅದು ಇರುವವರಿಗೆ ಯಾವಾಗಲೂ ಏನಾದರೂ ಕದಿಯಬೇಕು ಅಂತ ಕೈ ಕಡಿತ ಶುರುವಾಗುತ್ತಂತೆ.ಎಷ್ಟೋ ಜನ ಹಾಲಿವುಡ್ ತಾರೆಯರಿಗೂ ಈ ಚಟ ಇದೆಯಂತೆ.ನನಗೆ ಹಾಗೆ ನೋಡಿದ್ದೆಲ್ಲಾ ಕದಿಬೇಕು ಅಂತ ಅನ್ನಿಸದಿದ್ದರೂ, ಯಾವುದಾದರೂ ಪೆನ್ ಎಲ್ಲಾದರೂ ಅನಾಥವಾಗಿ ಬಿದ್ದಿದ್ದು, ಅಕ್ಕ ಪಕ್ಕ ಅದರ ವಾರಸುದಾರರು ಯಾರೂ ಇರದಿದ್ದಲ್ಲಿ ಆ ಪೆನ್ನನ್ನು ರಕ್ಷಿಸುವ ಜವಾಬ್ದಾರಿ ಹೊತ್ತುಕೊಳ್ಳುವ ನಾನು ಪೆನ್ ಕಳ್ಳಿಯೇ?ಸ್ವಲ್ಪ ವಿಚಾರ ಮಾಡಿ ಹೇಳಿ.

ಅಷ್ಟು ವಿಶಾಲವಾಗಿ ಯೋಚನೆ ಮಾಡದ,ಜವಾಬ್ದಾರಿ ಇಲ್ಲದೆ ತಮ್ಮ ಪೆನ್ನು ಗಳ ಎಲ್ಲಿ ಬೇಕೆಂದರಲ್ಲಿ ಎಸೆದು ಹೋಗುವ ಜನ,ಆಮೇಲೆ" ನನ್ನ ಪೆನ್ನು ಎಲ್ಲಿ" ಎಂದು ಹುಡುಕಿ ಕೊಂಡು ಬಂದು,ನನ್ನ ಬಳಿ ಏನಾದರೂ ಕಂಡರೆ "ಅಯ್ಯೋ,ಅದು ನನ್ನ ಪೆನ್ನು,ಕೊಡೆ ಕಳ್ಳಿ"ಅಂದರೆ ಸಿಟ್ಟು ಬರುವುದಿಲ್ಲವೆ ಹೇಳಿ?
ಹಾಗೆ ರಕ್ಷಣೆ ಕೊಡುವ ಸಲುವಾಗಿ ತೆಗೆದಕೊಂಡ ಪೆನ್ನು ಗಳನ್ನೆನ್ನೋ ಕೊಟ್ಟು ಬಿಡುವೆ. ಆದರೆ ಕೆಲವೊಮ್ಮೆ ಸಹೋದ್ಯೋಗಿಗಳಲ್ಲಿ ಯಾರಾದರೂ ಒಂದು ಒಳ್ಳೆ ಪೆನ್ನು ತಂದಾಗ,"ಒಮ್ಮೆ ಬರೆದು ನೋಡುತ್ತೇನೆ ಕೊಡಿ" ಎಂದು ಇಸಿದುಕೊಂಡು ಬರೆದು ನೋಡುವೆ.ಅದೇನಾದರೂ ಚೆನ್ನಾಗಿ ಬರೆಯಿತೊ ಅದನ್ನು ನನ್ನದಾಗಿಸಿ ಕೊಳ್ಳುವವರೆಗೆ ನನಗೆ ನಿದ್ದೆ ಬಾರದು.ಅವರ ಹಿಂದೆ ಮುಂದೆ ಸುಳಿದು,ಸಮಯ ಕಾಯ್ದು, ಹೊಂಚು ಹಾಕಿ,ಅವರು ಸ್ವಲ್ಪ ಮೈ ಮರೆಯುವುದನ್ನು ಕಾಯ್ದು ಹಾರಿಸಿ ಬಿಡುತ್ತೇನೆ.
ಅವರೋ ಒಂದೆರಡು ದಿನ "ಕದ್ದೋರಾ ಬೆರಳು ಮುರಿದು ಹೋಗಾ" ಅಂತ ಶಾಪ ಹಾಕಿ ಮತ್ತೆ ಇನ್ನೊಂದು ಪೆನ್ನು ಖರೀದಿಸಿ  ನಂತರ ಸ್ವಲ್ಪ ತಿಂಗಳು ಅಲರ್ಟ್ ಆಗಿ ಇರುತ್ತಾರೆ.ನಂತರ ಮತ್ತದೇ ಅವರ ಪೆನ್ನು ಸರಿಯಾಗಿ ಇಟ್ಟುಕೊಳ್ಳದ ಚಾಳಿ ಮರುಕಳಿಸಿ ಬರುವ ವಿಶ್ವಾಸ ನನಗಿದ್ದೇ ಇದೆ.
ನನ್ನ ಮೊದಲ ಶಾಲೆಯಲ್ಲಿ ಸುಮಾರು ವರ್ಷ ಯಾರಿಗೂ ಈ ಪೆನ್ನುಗಳ್ಳತನ ಅರಿವಿಗೆ ಬಂದಿರಲಿಲ್ಲ.ಹಾಗಾಗಿ "ಶಕುನ ಚೆನ್ನಾಗಿದೆ ಅಂತ ಬೆಳಗಾನಾ ಕಳ್ಳತನ ಮಾಡಿದ " ಅನ್ನೋ ಹಾಗೆ,ಯಾವಾಗ ನನ್ನ ದುರಾಸೆ ಹೆಚ್ಚಾಯಿತೋ ಆಗ ನಿಧಾನವಾಗಿ ಎಲ್ಲರಿಗೂ ವಾಸನೆ ಹೊಡೆಯಲು ಶುರುವಾಯಿತು.
ನನ್ನ ಗೆಳತಿ ಲತಾ ಅಂತೂ ಹೇಳೇ ಬಿಟ್ಟರು,"ಈವಮ್ಮ ಹಿಂಗೇ ಸುಳಿ ಗಾಳಿ ಹಾಗೆ ,ಆಫೀಸ್ ನಲ್ಲಿ ಸುಳಿದು ಬಂದರೆ ಸಾಕು,ಒಂದೆರಡು ಪೆನ್ನು ಗಳು ಮಾಯ ವಾಗಿರ್ತ್ತವೆ,ಹುಷಾರ್"ಎಂದು ಎಲ್ಲರನ್ನು ಎಚ್ಚರಿಸಿ ಬಿಟ್ಟರು.ತೊಗೊ ಅವತ್ತಿನಿಂದ ನನ್ನ ಜೀವನ  ನೀರಸವಾಗಿ ಕೆಲವೇ ವರ್ಷಗಳಲ್ಲಿ ಆ ಶಾಲೆಯೇ ಬೇಡವೆನಿಸಿ ಇನ್ನೊಂದು ಶಾಲೆಗೆ ವರ್ಗಾವಣೆ ತೊಗೊಂಡು ಬಂದು ಬಿಟ್ಟೆ.ಬೀಳ್ಕೊಡುವ ದಿನ,ತಮ್ಮ ಭಾಷಣದಲ್ಲಿ ನನ್ನ ಗೆಳತಿ ಶೋಭಾ"ಇನ್ನಾದರೂ ನಿಮ್ಮ ಈ ಪೆನ್ನುಗಳ್ಳ ತನದ ಚಾಳಿ ಬಿಟ್ಟು,ಒಳ್ಳೆಯವರಾಗಿ,ಇದ್ದ ಶಾಲೆಗೂ,ಹೋಗುವ ಶಾಲೆಗೂ ಒಳ್ಳೆ ಹೆಸರು ತನ್ನಿ"ಎಂದು ಎಲ್ಲಾ ಸಹೋದ್ಯೋಗಿಗಳ ಮನದಾಳದ ಮಾತುಗಳ ತಾವೇ ಹೇಳಿ ಹರಸಿದರು.ನಾನು ಒಳಗೊಳಗೇ ಹಲ್ಲು ಕಡಿದು ಕೊಂಡರೂ,ಎಲ್ಲರೂ ಒಂದೊಂದು ಪೆನ್ನು ಕೊಡುವರೇನೋ ಎಂದು ಕಾಯ್ದರೇ ಒಂದು ಸೀರೆ ಕೊಟ್ಟು ಕಳಿಸುವುದೇ!

ನನ್ನ ಹೊಸ ಶಾಲೆಯಲ್ಲಿ ಕೂಡ ಸುಮಾರು ದಿನ ನನ್ನ ಗುಟ್ಟು ಕಾಪಾಡಿಯೇ ಕೊಂಡಿದ್ದೆ.ಆದರೆ ಒಂದು ದಿನ ಸ್ಟಾಫ್ ರೂಂನಲ್ಲಿ ಯಾಕೋ ನನ್ನ ಬ್ಯಾಗನ್ನು ಕೊಡವಿದಾಗಾ,ತುಪತುಪನೆ ಉದುರಿದ ಪೆನ್ನುಗಳ ಸದ್ದಿಗೆ ಕುತೂಹಲದಿಂದ ನನ್ನ ಟೇಬಲ್ ನೋಡಿದ ಸಹೋದ್ಯೋಗಿಗಳನ್ನ, ಅವರವರ  ಪೆನ್ನು ಗಳು ಇಣುಕಿ ನೋಡಿ ಕರೆದಾಗ ,ಅವರಿಗೆಲ್ಲ ಹೃದಯಾಘಾತ ಆಗದೇ ಇರುವುದೊಂದೇ ಬಾಕಿ.ಎಲ್ಲಾ ಓಡಿ ಬಂದು" ಅಯ್ಯೋ ನನ್ನ ಪೆನ್ನು,ನನ್ನ ಪೆನ್ನು" ಅಂತ ಎಂದೂ ಪೆನ್ನು ಕಾಣದವರ ಹಾಗೆ  ಬಾಚಿಕೊಂಡು ಹೋದರು.ಸಾಲದು ಅಂತ ನಮ್ಮ ಹೆಚ್ಚೆಂ ಮೇಡಂ ರವರಿಗೆ"ಮೇಡಂ ಈ ಪೆನ್ ಕಳ್ಳಿಗೆ ಒಂದು ಬಲವಾದ ಮೆಮೊ ಕೆಂಪು ಇಂಕಿನಲ್ಲಿ ಹಾಕಿ"ಅಂತ ಬೇರೆ ಚಾಡಿ ಹೇಳಿ ಕೊಟ್ಟು ಬಿಟ್ಟರು.ಪಾಪ ಅವರೋ ಬರಿ ಮಾತಿನಲ್ಲೇ ಎಚ್ಚರಿಕೆ ಕೊಟ್ಟು,ಉಳಿದವರಿಗೆ "ನಿಮ್ಮ ಪೆನ್ನುಗಳಿಗೆ ನೀವೇ ಜವಾಬ್ದಾರರು,ನನ್ನ ತನಕ ತರಬೇಡಿ"ಅಂದು ಹೇಳಿದಾಗ, ನಾನು "ನಿಮಗೆಲ್ಲ ಹಂಗೇ ಆಗ್ಬೇಕು"ಅಂತ ನೆಟಿಕೆ ಮುರಿದು ಸುಮ್ಮನಾದೆ. ಅಮೇಲಂತು ಎಲ್ಲರೂ ಬಹಳ ಅಲರ್ಟ್ ಆಗಿ ಬಿಟ್ಟು ತಮ್ಮ ತಮ್ಮ ಪೆನ್ನುಗಳನ್ನು ತಮ್ಮ ಮಕ್ಕಳಂತೆ ಕಾಪಾಡಿ ಕೊಳ್ಳುತ್ತಿದ್ದಾರೆ.ಒಮ್ಮೊಮ್ಮೆಯಂತೂ ಯಾರದೇ ಪೆನ್ನು ಕಳುವಾಗಲಿ ಅವರ ಗುಮಾನಿಯ ಕಣ್ಣು ನನ್ನ ಕಡೆಗೇ ತಿರುಗಿದಾಗ, ನಾನು"ಅಲ್ಲ ಕಣ್ರೀ, ಹೂಸಿದೋರು ಯಾರೂ ಅಂದ್ರೆ ಮಾಸಿದ ಸೀರೆಯವರು ಅನ್ನೋ ಹಂಗೇ ಆಡ್ತಿರಲ್ಲ"ಅಂತ ದಬಾಯಿಸಿ ಕಳಿಸುತ್ತೇನೆ.

ನಾನೇನು ಪೆನ್ನು ಕದ್ದು ಸುಮ್ಮನೆ ಶೋಕಿಗಾಗಿ ಏನೂ ಇಟ್ಟು ಕೊಳ್ಳುವುದಿಲ್ಲ.ಬರೆಯುವುದು ಅಂದ್ರೆ ನನಗೆ ಖುಷಿಯೋ ಖುಷಿ.ಗಣಿತ ಟೀಚರ್ ಅಲ್ಲವೇ,ಬರೆಯದೆ ಲೆಕ್ಕ ಬಿಡಿಸದೆ ಪಾಠ ಮಾಡಲು ಸಾಧ್ಯವೇ?ಅಲ್ಲದೆ  ಶಾಲೆಗಳಲ್ಲಿ ಇಡಬೇಕಾದ ಹಲವಾರು ದಾಖಲೆಗಳನ್ನ ಬರೆಯುವುದು ಕೂಡ ಖುಷಿಯೇ.ಕಚೇರಿ ಕೆಲಸ ಗಳಿಗಾಗಿ ಬರೆದಿರುವ ಪತ್ರ ಗಳಿಗಂತು ಲೆಕ್ಕವೇ ಇಲ್ಲ. ಚಿಕ್ಕಂದಿನಲ್ಲಿ ಊರಿಗೆ ಬರೆಯುವ ಕಾಗದ ಗಳು,ಮನೆಯ ರೇಶನ್ ಪಟ್ಟಿ ಬರೆಯುವ ಕೆಲಸ ಎಲ್ಲ ನನ್ನ ಪಾಲಿಗೆ.ಶಾಲಾ ಕಾಲೇಜು ದಿನಗಳಲ್ಲಿ ಒಂದು ರಾಶಿ ರಾಶಿ ನೋಟ್ಸ್ ಗಳ ಬರೆದದ್ದೇ ಬರೆದದ್ದು.
ಕಾಗೆ ಕಾಲು,ಗುಬ್ಬಿ ಕಾಲಂತ ಅಕ್ಷರಗಳ ನನ್ನ ತಮ್ಮನಿಗೆ,ಒಮ್ಮೆ ನೋಟ್ಸ್ ಎಲ್ಲಾ ಬರೆದುಕೊಟ್ಟು,ಕಾಲೇಜ್ ನಲ್ಲಿ ಅವನ ಲೆಕ್ಚರರ್ ನೋಡಿ,"ಎಷ್ಟು ಚಂದದ ಬರಹ,ಒಳ್ಳೆ ಹುಡುಗೀರ ಹಸ್ತಾಕ್ಷರ ಇದ್ದಾಗೆ ಇದೆ"ಎಂದು ಮೆಚ್ಚಿಕೊಂಡಾಗ,"ನಾನು ಒಳಗೊಳಗೇ ನಕ್ಕು ಸುಮ್ಮನಾದೆ ಕಣೇ"ಅಂತ ಮನೆಗೆ ಬಂದು ಬಿದ್ದು ಬಿದ್ದೂ ನಕ್ಕ.

ಹೀಗೆ ಎಷ್ಟೋ ರೀತಿಯ ಬರವಣಿಗೆ ಮಾಡಿದರೂ ಯಾರಿಗಾದರೂ ಒಂದು ಪ್ರೇಮ ಪತ್ರ ಬರೆಯುವ ಧೈರ್ಯ ಸಾಹಸ ನನ್ನಿಂದ ಆಗಲಿಲ್ಲವಲ್ಲ ಅನ್ನೋ ಕೊರಗು ಯಾವಾಗಲೂ ಕಾಡುತ್ತದೆ.
ಹೀಗೆ ಬರೆಯುವುದನ್ನು ಅತಿಯಾಗಿ ಪ್ರೀತಿಸುವ ನನಗೆ ಪೆನ್ನುಗಳ ಮೇಲಿನ ಮೋಹ ಸಹಜವಾಗಿಯೆ ಬಂದು ಬಿಟ್ಟಿದೆ.
ನನ್ನ ಪೆನ್ನು ಅವರ ಪೆನ್ನು ಅನ್ನೋ ಬೇಧ ಭಾವ ನಾನೆಂದೂ ಮಾಡಿದವಳೇ ಅಲ್ಲ.
ಮನೆಯಲ್ಲಿ ಸುಮಾರು ಸರಿ ನನ್ನ ಗಂಡನ ಜೋಬಿನಿಂದಲೂ ಪೆನ್ನುಗಳನ್ನ ಹಾರಿಸಿ ಒಮ್ಮೆ ಸಿಕ್ಕು ಬಿದ್ದಾಗ,"ನೋಡೇ,ಬೇಕಾದ್ರೆ ದುಡ್ಡು ತೊಗೊ ಜೇಬಿಂದ, ನಂಗೇನೂ ಬೇಜಾರಿಲ್ಲ,ಆದರೆ ಪೆನ್ನು ತೋಗೊಬೇಡ,ಕಾಲೇಜ್ ನಲ್ಲಿ ಹಾಜರಾತಿಗೆ ಸಹಿ ಹಾಕುವಾಗ ಪೆನ್ನು ಸಿಗದೆ,ಇನ್ನೊಬ್ಬರ ಕೇಳುವಾಗ ಎಷ್ಟು ಮುಜುಗರ ಆಗುತ್ತೆ ಗೊತ್ತಾ "ಅಂದಾಗ ಪಾಪ ಅನಿಸಿ ಅವರ ಪೆನ್ನುಗಳ ಕಡೆ ನೋಡೋದನ್ನೆ ಬಿಟ್ಟು ಬಿಟ್ಟೆ.

ಆದರೆ ನನ್ನ ಈ ಪೆನ್ ಮೋಹದ ಮೇಲೆ ಯಾರ ಕಣ್ಣು ಬಿತ್ತೋ ಏನೋ.ಈಗೀಗ ಶಾಲೆಯ ಕಚೇರಿ ಕೆಲಸವೆಲ್ಲ ಅಂತರ್ಜಾಲ ಬಳಸಿ ಕಂಪ್ಯೂಟರ್ ಅನ್ನೋ ಪೆನ್ನು ಮುರುಕ  ಯಂತ್ರ ದಲ್ಲೇ,ದಾಖಲೆಗಳ ನಿರ್ವಹಿಸುವುದರ ಮೂಲಕ ಆಗುತ್ತಿದೆ.ಕಂಪ್ಯೂಟರ್ ಇಲ್ದಿದ್ರೆ ಸ್ಮಾರ್ಟ್ ಫೋನ್ ಅನ್ನೋ ಯಕ್ಷಿಣಿ ಇದ್ದಾಳಲ್ಲ, ಅವಳೇ ವಾಟ್ಸಪ್ ಪಾರಿವಾಳದ ಮೂಲಕ ಎಲ್ಲಾ ಸಂದೇಶಗಳನ್ನು ಇಲಾಖೆಗಳಿಗೆ ತಲುಪಿಸಿಬಿಡುತ್ತಾಳೆ.
ಬರವಣಿಗೆಯೇ ಇಲ್ಲದಿದ್ದ ಮೇಲೆ
ಇನ್ನು ನನ್ನ ಪಾಪದ ಪೆನ್ನುಗಳ ಕೇಳುವವರ್ಯಾರು ಅಂತ ಅನ್ನಿಸಿ ,"ಇರಿ ನಿಮಗೆ ಕೆಲಸ ಕೊಡುವೆ" ಎಂದು ಲೇಖಕಿಯಾಗಲು ಹೊರಟೆ.

ಬರೆಯೋದೇನೋ ಪುಟಗಟ್ಟಲೆ ಬರೆದೆ,ಆದ್ರೆ ಪತ್ರಿಕೆ ಗಳಿಗೆ,ಬ್ಲಾಗ್ ಗಳಿಗೆ ಕಳುಹಿಸಲು ಡಿ ಟಿ ಪಿ ಮಾಡಿ ಕಳುಹಿಸಿದರೆ ಒಳ್ಳೆಯದು,ಬೇಗ ಪ್ರಕಟಿಸುತ್ತಾರೆ ಎಂದು ನನ್ನ ಗೆಳತಿ  ಸುನೀತ ಹೇಳಿದ್ದಕ್ಕೆ,ಕಂಪ್ಯೂಟರ್ ಸೆಂಟರ್ ನ ಹುಡುಗಿ ಹತ್ತಿರ ಕುಳಿತು, ಎಲ್ಲ ಲೇಖನಗಳನ್ನ ಟೈಪಿಸಿ ,ಪ್ರತಿಗಳನ್ನ ತೆಗೆದು ಕಳುಹಿಸುವಷ್ಟರಲ್ಲಿ ಸಾಕು ಸಾಕಾಯಿತು.


ಅಷ್ಟರಲ್ಲಿ ನನ್ನ ಗೆಳತಿ ಸ್ಮಿತಾ"ನೋಡು ,ನೀನು ಸ್ಮಾರ್ಟ್ ಫೋನ್ ನಲ್ಲೆ ಟೈಪಿಸಿ, ಈ ಮೇಲ್ ಮಾಡಿ ಬಿಡು.ಅದು ಇನ್ನೂ ಸುಲಭ,ಸಾಕಷ್ಟು ಸಮಯ ಉಳಿಯುತ್ತದೆ" ಎಂದು ಸಲಹೆ ಕೊಟ್ಟಾಗ,ಸ್ಮಾರ್ಟ್ ಫೋನ್ ನಲ್ಲೇ ನನ್ನ ಎಲ್ಲ ಬರವಣಿಗೆ ಈಗ ನಡೆಯುತ್ತಿದೆ.ಕೆಲವೊಂದು ಫೋನ್ ಗಳಲ್ಲಂತೂ ಟೈಪಿಸುವುದೇ ಬೇಡ,ಬರಿ ಮಾತನಾಡುತ್ತ ಹೋದರೆ ಸಾಕು ಅದೇ ಟೈಪಿಸಿ ಕೊಂಡು ಹೋಗುತ್ತದೆ.ಹೀಗಾಗಿ ಶಾಲೆಯ ಎಲ್ಲಾ ದಾಖಲೆಗಳು,ನನ್ನಬರಹಗಳ ಫೋನ್ ನಲ್ಲೇ ಮಾಡಿ ಪ್ರಿಂಟರ್ ಗಳಲ್ಲಿ ಪ್ರತಿ ತೆಗೆದುಕೊಂಡರೆ ಸಾಕು.ಕೆಲಸ ಇಷ್ಟು ಸುಲಭ ವಾಗಿರುವಾಗ ಬರೆಯುವ ಕಷ್ಟ ಯಾರಿಗೆ ಬೇಕು?

ಮಕ್ಕಳಿಗೆ ಮಾತ್ರ ಬರೆಯುವುದು ಇದ್ದೇ ಇದೆ,ಆದರೆ ಉನ್ನತ ತರಗತಿ ಗಳಿಗೆ ಹೋದ ಹಾಗೆಲ್ಲ ಲ್ಯಾಪ್ ಟಾಪ್ ಇಲ್ಲದೆ ಕಲಿಕೆ ಇಲ್ಲವಲ್ಲ.ಹಾಗಾಗಿ ಬರೆಯುವುದು ಕ್ರಮೇಣ ಅವರಿಗೂ ಬಿಟ್ಟು ಹೋಗುತ್ತಾ ಹೋಗುತ್ತದೆ.
ಬ್ಯಾಂಕ್ ಉದ್ಯೋಗಿಯಾಗಿರುವಾ ನನ್ನಣ್ಣ ಇತ್ತೀಚೆಗೆ ಒಂದು ಹಿಡಿ ಪೆನ್ನುಗಳು ಮತ್ತು ಒಂದಷ್ಟು ಖಾಲಿ ನೋಟ್ ಪ್ಯಾಡ್ ಗಳನ್ನೂ ತಂದು ಕೊಟ್ಟು,"ಬ್ಯಾಂಕ್ ನಲ್ಲಿ ಎಲ್ಲಾ ಕೆಲಸ ಕಂಪ್ಯೂಟರ್ ನಲ್ಲಿ ಆಗುತ್ತೆ,ಹುಡುಗರಿಗೆ ಏನಾದ್ರೂ ಬರೆಯೋಕೆ ಆಗುತ್ತೇ ತೊಗೊ"ಅಂತ ಕೊಟ್ಟು ಹೋದ.ಇನ್ನು
ಒಳಾಂಗಣ ವಿನ್ಯಾಸ ಕಾರನಾಗಿರುವ ನನ್ನ ತಮ್ಮನ ಎಲ್ಲಾ ಕೆಲಸ ಆತನ ಲ್ಯಾಪ್ ಟಾಪ್ ನಲ್ಲೇ."ಪೆನ್ ಹಿಡಿಯುವುದು ಏನಾದರೂ ದಾಖಲೆ ಇಲ್ಲ ,ಚೆಕ್ ಸಹಿ ಮಾಡಲು ಮಾತ್ರ ಕಣೇ"
ಅಂತ ನಗಾಡುತ್ತಾನೆ.
ಮತ್ತೆ ನನ್ನ ಸಹೋದ್ಯೋಗಿಗಳು ಕೂಡ  ಎಲ್ಲಾ ಬರವಣಿಗೆ ಕೆಲಸ  ಕಂಪ್ಯೂಟರ್, ಸ್ಮಾರ್ಟ್ ಫೋನ್ ,ಪ್ರಿಂಟರ್,ಅಂತ ಬಳಸಿಕೊಂಡು ಮಾಡಿಕೊಳ್ಳುತ್ತಾರೆ. ಇನ್ನು ನಾನು ಹಳೆಕಾಲದ ಪಳೆಯುಳಿಕೆಯಂತೆ ಪೆನ್ನು ಹಿಡಿದು ಬರೆಯುತ್ತಾ ಕೂರಲೆ?ಹಾಗಾಗಿ ನಾನೂ ಅವರ ದಾರಿಯನ್ನೇ ಹಿಡಿದಿರುವೆ.

ನಾನೂ ಕೂಡ ತಮ್ಮ ಕೈ ಬಿಟ್ಟ ಬಳಿಕ ನನ್ನ ಪೆನ್ನುಗಳು ಬೇರೆ ದಾರಿ ಕಾಣದೆ,ಪೆನ್ ಸ್ಟ್ಯಾಂಡ್ ನಲ್ಲಿ ತುರುಕಿಸಿಕೊಂಡು ಒಂದನ್ನೊಂದು ತಬ್ಬಿಕೊಂಡು ಕುಳಿತಿವೆ."ಅಕ್ಕಾ,ಒಮ್ಮೊಮ್ಮೆ ನಮ್ಮ ಕಡೆಯೂ ನೋಡು "ಎಂದಾಗ ಅಪಾರ ದುಕ್ಕವಾದರೂ,
ಕಂಡೂ ಕಾಣದಂತೆ,ಕೇಳಿಯೂ ಕೇಳದಂತೆ ಸುಮ್ಮನಾಗುತ್ತೇನೆ.
ಮೊದಲೆಲ್ಲ ವರ್ಷಕ್ಕೆ ಒಂದೆರಡು ಡಜನ್ ಪೆನ್ನುಗಳಾದರೂ ಬಳಸುತ್ತಿದ್ದ ನನಗೆ ಈಗ ನಾಲ್ಕು,ಒಂದು ನೀಲಿಯ ಮತ್ತೆ ಮೂರು ಕೆಂಪು ಇಂಕಿನ ಪೆನ್ನುಗಳು ಸಾಕು.ಒಂದು ಹಾಜ ರಾತಿಯಲ್ಲಿ ಸಹಿ ಮಾಡಲು,ಉಳಿದವು ಮಕ್ಕಳ ನೋಟ್ಸ್
ತಿದ್ದಲು ಸಾಕು.ಹಾಗಾಗಿ ನನ್ನ ಪೆನ್ನುಗಳ್ಳತನ ತಾನೇ ತಾನಾಗಿ ಮರೆಯಾಗುತ್ತಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ

 ಉಪ್ಪಿನ ಕಾಯಿಗೆ ಒಂಚೂರು ಅನ್ನ..   "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...