ಶನಿವಾರ, ಜುಲೈ 25, 2020

ಭಾನುವಾರದ ಬಾಡೂಟ...


        ಭಾನುವಾರದ ಬಾಡೂಟ

ಕುವೆಂಪು ರವರ ಬರವಣಿಗೆ ಅದರಲ್ಲೂ ಅವರ ಎರಡು ಕಾದಂಬರಿಗಳು ನನಗೆ ಬಹಳ ಅಚ್ಚುಮೆಚ್ಚು. ಅವರು ಸೃಷ್ಟಿಸಿರುವ ಈ ಎರಡೂ ಮಾಯಾಲೋಕ ಗಳಂತಹ ಕಾದಂಬರಿ ಗಳಲ್ಲಿ ಬರುವ ಪಾತ್ರಗಳೂ ಅನೇಕಾನೇಕ ಹಾಗೂ ಅಪಾರ ಪ್ರಸಿದ್ದಿ ಪಡೆದ ಪಾತ್ರಗಳೇ.ಅವರ ಬರವಣಿಗೆ ವಿಮರ್ಶೆ ಮಾಡುವಷ್ಟು ಸಾಹಿತ್ಯ ನನ್ನಂಥ ಹವ್ಯಾಸಿ ಸಾಹಿತ್ಯ ಪ್ರೇಮಿಗೆ ಖಂಡಿತಾ ಗೊತ್ತಿಲ್ಲ.ಆದರೆ ಸಾಹಿತ್ಯ ಓದಿ ಆಸ್ವಾದಿಸಲು ಸಾಹಿತ್ಯದ ವಿದ್ಯಾರ್ಥಿಯೇ ಆಗಿರಬೇಕೆಂದು ಏನೂ ಇಲ್ಲವಷ್ಟೇ.ಅವರ ಅಪಾರ ಪಾತ್ರ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿ ಪಾತ್ರಗಳನ್ನು ಅವರು ಸೃಷ್ಟಿ ಮಾಡಿದ್ದರೂ ನನ್ನ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಪಾತ್ರ ಅವರ ಕಾನೂರು ಹೆಗ್ಗಡತಿ ಯಲ್ಲಿ ಬರುವ ಬಾಡುಗಳ್ಳ ಸೋಮನೇ.

     ಅವನ ಪಾತ್ರ ಚಿತ್ರಣ ಓದಿದಾಗೆಲ್ಲಾ ನನಗೆ ಅನ್ನಿಸುವುದು ಆತ ಖಂಡಿತಾ ನನ್ನ ಪೂರ್ವಜನ್ಮದ ಯಾರೋ ಆತ್ಮ ಬಂಧುವೇ ಇರಬೇಕೆಂದು.ಕುವೆಂಪು ಪ್ರಕಾರ ಆತನಿಗೆ  ಮಾಂಸ ದೆಡೆಗೆ ಇದ್ದದ್ದು ಶುದ್ಧ ಲೋಭ ಮಾತ್ರ,ಆದರೆ ನನಗೋ ಲೋಭದ ಜೊತೆಗೆ ಮೋಹ,ಪ್ರೀತಿ,ಆದರ ,ಇನ್ನೂ ಏನೇನು ಗುಣ ವಿಶೇಷಣಗಳಿವೆಯೋ ಅವೆಲ್ಲವೂ ಇವೆ.
ಅದೇನೋ ಸಸ್ಯಾಹಾರವೆಂದರೆ ನನಗೆ ಸ್ವಲ್ಪ ಅಷ್ಟಕಷ್ಟೆ .ಊಟದ ಜೊತೆಗೆ ಒಂದೆರಡು ತುಂಡು ಬಾಡಿದ್ದರೆ ಅದರ ರುಚಿಯೇ ಬೇರೆ.
ಇದು ನನಗೆ ಬಹಳ ಚಿಕ್ಕಂದಿಲಿಂದಲೇ ಆಗಿರುವ ರೂಡಿ.ಅದು ಏನಾಯಿತು ಅಂದ್ರೆ,ಮಾಂಸದಡಿಗೇ ನಮ್ಮಮ್ಮ ಮಾಡುತ್ತಿದ್ದಾಗ ಅವರ ಜೊತೆಗೆ ಅವರ ಸಹಾಯಕ್ಕೆ ಅಂತ ಸೇರಿಕೊಂಡು, ಮಾಡುತ್ತಾ ಮಾಡುತ್ತಾ ಬಹಳ ಬೇಗನೆ ಕಲಿತು ಬಿಟ್ಟೆ.ಅಡುಗೆ ಮಾಡುತ್ತಲೇ," ಬೆಂದಿದೆಯ ನೋಡು,ಉಪ್ಪು ಕಾರ ಹಿಡಿದಿದೆಯಾ ನೋಡು "ಅಂತ ತಿನ್ನಲು ಅಮ್ಮ ಕೊಟ್ಟು ಕೊಟ್ಟು ಚೆನ್ನಾಗಿ ತಿನ್ನುವ ಅಭ್ಯಾಸವಾಗಿ ಹೋಯಿತು.ಕೋಳಿ,ಕುರಿ,ಆಡು ಇದೆಲ್ಲದರ ಮಾಂಸ ನನಗೆ ಪ್ರಿಯವಾದದ್ದು, ಆದರೆ ಮೀನು ಯಾಕೋ ರುಚಿಸದೇ ಹೋಯಿತು. ಆದೊಂದಿಲ್ಲದಿದ್ದರೆ ಏನಾಯಿತು ಬಿಡಿ, ಉಳಿದ ವುಗಳೇ ಸಾಕಲ್ಲವೇ.

ಬರಿ ಮಾಂಸ ತಿನ್ನುವ ಅಭ್ಯಾಸವಾದರೆ ಸಾಲದು,ಯಾವ ಯಾವ ಪ್ರಾಣಿಯ ಯಾವ ಯಾವ ಅಂಗ ಹೆಚ್ಚು ರುಚಿಕರ,ಅದನ್ನು ತಯಾರಿಸುವ ವಿಧಾನ ಕೂಡ ಕಲಿತಿರಬೇಕು.ನನಗಂತೂ ನಾಟಿ ಕೋಳಿ ತಲೆ,ಲಿವರ್, ಗುಂಡುಕಾಯಿ ಅಂದರೆ ಪಂಚಪ್ರಾಣ. ಇನ್ನು ಆಡು ಕುರಿಗಳ ಬೋಟಿ ಗೊಜ್ಜಿಗಾಗಿ ನಾನು ನನ್ನ ಅರ್ಧ ಸಾಮ್ರಾಜ್ಯವನ್ನೇ ಕೊಟ್ಟು ಬಿಟ್ಟೇನು. ಅಂದ ಹಾಗೆ ಆಡು ,ಕುರಿಗಳ ತಲೆ ಕಾಲು ಮಾಂಸದ ಸಾರು ಮಾಡುವುದೇ ಒಂದು ವಿಶಿಷ್ಟ ವಿಧಾನವಿದೆ.ರಾತ್ರೆಯ ಹೊತ್ತು  ಸಾರಿನ ತಪ್ಪಲೆಯನ್ನು,ಒಂದು ಮಣ್ಣಿನ ಒಲೆಯ ಮೇಲಿಟ್ಟುಮಾಂಸಕ್ಕೆ ಎಲ್ಲಾ ಹದ ಹಾಕಿ ,ಮಸಾಲೆ,ಖಾರಾ ಎಲ್ಲಾಹಾಕಿ ವಗ್ಗರಣೆ ಹಾಕಿ,  ಚೆನ್ನಾಗಿ ಮುಚ್ಚಿ,ಗಮ ಆರಿ ಹೋಗದಂತೆ ಮುಚ್ಚಳದ ಮೇಲೆ ಒಂದು ಭಾರವಾದ ಪಾತ್ರೆಯೋ,ಇಲ್ಲವೇ ಸಣ್ಣ ಗುಂಡು ಕಲ್ಲನ್ನು ಇಟ್ಟು,ಒಲೆಗೆ ಚೆನ್ನಾಗಿ ಸೌದೆ ತುಂಬಿ ಸಣ್ಣದಾಗಿ ಉರಿಯುವಂತೆ ಮಾಡಿ,ರಾತ್ರಿ ಇಡೀ ಬಿಡಬೇಕು.ಬೆಳಗ್ಗೆ ಯಾಗುವಷ್ಟರಲ್ಲಿ ಹದವಾಗಿ ಬೆಂದ ತಲೆ ಕಾಲಿನ ಸಾರಿನ ಜೊತೆ ಅಕ್ಕಿರೊಟ್ಟಿ ಮಾಡಿಕೊಂಡು ತಿಂದು ನೋಡಿ. ಇಡೀ ದಿನ ಕೈ ಮೂಸಿಕೊಂಡೆ ಇರಬಹುದು.

ಅವರೆಕಾಳಿನ ಕಾಲದಲ್ಲಿ ಸೊಗಡವರೆ ತಂದು ಸುಲಿದು, ಕಾಳು ಚಿಲುಕಿಸಿ, ಚಿಲುಕವರೆ ಕಾಳಿನ ಸಾರಿಗೆ ಕೈಮಾ ಉಂಡೆ ಗಳನ್ನ ಹಾಕಿ ಸಾರು ಮಾಡಿದರೆ ತಿನ್ನಲು ಒಂದು ಕೈ ಸಾಲದು.
ಚಿಕ್ಕ ಮಕ್ಕಳಿಗೆ ತರಕಾರಿ,ಸೊಪ್ಪು ತಿನ್ನುವಂತೆ ಮಾಡುವುದು ಎಲ್ಲಾ ತಾಯಂದಿರ ಒಂದು ದೊಡ್ಡ ತಲೆನೋವು. ಅದಕ್ಕೆ ನನ್ನ ಗೆಳತಿಯೊಬ್ಬರು ಒಂದು ಒಳ್ಳೆಉಪಾಯ ಹೇಳಿಕೊಟ್ಟಿದ್ದಾರೆ. ಯಾವುದೇ ತರಕಾರಿಯ ಒಗ್ಗರಣೆ ಪಲ್ಯ ಮಾಡಿ ಅದಕ್ಕೆ ಒಂದೆರಡು ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಹುರಿದ್ರೆ ಸಾಕು ಮಕ್ಕಳು ಕಮಕ್ ಕಿಮಕ್ ಅನ್ನದೆ ತಿನ್ನುತ್ತಾರೆ.

ಈಗೀಗ ಮಾತ್ರ ಎಲ್ಲಾ ಕಡೆ ಅಗ್ಗವಾಗಿ ಬ್ರಾಯಲರ್ ಕೋಳಿಗಳು ಸಿಗುತ್ತವೆ. ದರವೂ ಕಡಿಮೆ ಮತ್ತು ಬೇಯಿಸಲೂ ಕೂಡ ಸುಲಭ ಹಾಗಾಗಿ ಯಾರೇ ನೆಂಟರು ಬಂದರೂ ಒಂದು ಗಂಟೆಯಲ್ಲಿ ಬಿರಿಯಾನಿ,ಕಬಾಬ್,ಚಿಕನ್ ಗೊಜ್ಜು ಅಂತ ಪಟಾ ಪಟ್ ತಯಾರಿಸಿ ಸತ್ಕರಿಸಿ ಕಳಿಸಿ ಬಿಡಬಹುದು.ಆದರೆ ನಾವುಗಳು ಚಿಕ್ಕವರಿದ್ದಾಗ ಕೋಳಿ ಅಂದ್ರೆ ಮನೆಗಳಲ್ಲಿ ಸಾಕುತ್ತಿದ್ದ ನಾಟಿ ಕೋಳಿಗಳೆ.ಇವು ಬೇಯುವುದು ಸ್ವಲ್ಪ ಕಷ್ಟ,ಹಾಗಾಗಿ ಬೇರೆ ವ್ಯಂಜನಗಳಿಗಿಂತ ಸಾರು ಮಾಡುವುದೇ ಸರಿ.ನಾಟಿಕೋಳಿ ಸಾರಿಗೆ ಹೊಂದಿಕೆಯಾಗುವುದು ಅಂದರೆ ರಾಗಿ ಮುದ್ದೆ ಇಲ್ಲವೇ ಒತ್ತು ಶಾವಿಗೆಯೆ.ಊರ ಕಡೆ ನೆಂಟರಿಗೆ,ಹೊಸ ಅಳಿಮಯ್ಯನಿಗೆ ಔತಣ ಅಂದ್ರೆ ಇದೇ ಅಡಿಗೆ. ಮತ್ತೆ ಮನೆಗಳಲ್ಲಿ ಬಾಣಂತಿಯರು ಇದ್ದರೆ ಅವರಿಗೆ ಅಂತ ಚಿಕ್ಕ ಚಿಕ್ಕ ಕೋಳಿಗಳನ್ನು ಕುಯ್ಯದೆ ಬಿಟ್ಟುಕೊಂಡು,ಬಾಣಂತಿಗೆ ಊಟಕ್ಕೆ ಅಂತ ಒಂದು ಇಡೀ ಕೋಳಿಯನ್ನು ಕುಯ್ದು ಅಡಿಗೆ ಮಾಡಿ , ಒಂದಿಡೀ ಕೋಳಿ ಮಾಂಸ ಅವಳಿಗೆ ಊಟಕ್ಕೇ ಇಕ್ಕುತ್ತಿದ್ದರು.ಬಾಣಂತಿಗೆ ಚೆನ್ನಾಗಿ ಮೈ ಪುಷ್ಟಿ ಯಾಗಬೇಕಲ್ಲವೇ.ಹಾಗೇ ನನ್ನ ಎರಡೂ ಬಾಣಂತನಗಳಲ್ಲಿ ಸಾಕಷ್ಟು ನಾಟಿ ಕೋಳಿಗಳ ಜೀವಕ್ಕೆ ನಾನು ಎರವಾಗಿದ್ದೇನೆ.

ಬರಿ ನಾಟಿಕೋಳಿ ಏನೂ, ಬ್ರಾಯಲರ್ ಕೋಳಿ ಕೂಡ ನನಗೆ ಪ್ರಿಯವೇ.ಮದುವೆಯ ಸಮಯದಲ್ಲಿ ನನ್ನ ನೋಡಲು ನನ್ನ ಗಂಡ ಬಂದಿದ್ದಾಗ "ಹುಡುಗಿ ತೆಳ್ಳ ಗಿರಬೇಕು"ಅಂತ ಹುಡುಕುತ್ತಿದ್ದ ಅವರು ನನ್ನನು ನೋಡಿ ಒಪ್ಪಿ ಮದುವೆಯಾಗಿದ್ದರು.ಆದರೆ ಮದುವೆಯಾದ ಬಳಿಕ ನನ್ನ ಗಾತ್ರಕ್ಕೂ, ನಾನು ತಿನ್ನುವ ಚಿಕನ್ ನ  ಪ್ರಮಾಣಕ್ಕೂ ಹೊಂದಿಕೆ ಯಾಗದೆ ಅವರಿಗೆ ಅಚ್ಚರಿಯೋ ಅಚ್ಚರಿ.ಒಮ್ಮೊಮ್ಮೆ ತಂದದ್ದನ್ನೆಲ್ಲ ಒಂದೇ ಹೊತ್ತಿಗೆ ತಿಂದು ಮುಗಿಸುವ ನನ್ನ ಚಪಲಕ್ಕೆ ಬುದ್ದಿ ಹೇಳುತ್ತಾ"ನೋಡೇ ಎಲ್ಲವನ್ನೂ ನೀನೊಬ್ಬಳೆ ತಿನ್ನು,ನನಗೆ ಒಂದು ಪೀಸ್ ಕೂಡ ಕೊಡಬೇಡ,ಆದ್ರೆ ಸ್ವಲ್ಪ ಸ್ವಲ್ಪ ವೇ,ಸ್ವಲ್ಪ ಸ್ವಲ್ಪ ಬಿಡುವು ಕೊಟ್ಟು ತಿನ್ನು.ಎಲ್ಲಾ ಹೀಗೆ ಒಟ್ಟಿಗೆ ಮುಕ್ಕಿದರೆ ಆರೋಗ್ಯದ ಗತಿಯೇನು"ಎಂದು ಎಚ್ಚರ ಹೇಳಿದರೂ ನಾನೇನು ಕೇಳುವವಳೆ?ತಿನ್ನ ಬೇಕಾದರೆ ಚೆನ್ನಾಗಿ   ಬಿಸಿ ಬಿಸಿ ಯಾಗಿ ಇರುವಾಗಲೇ ತಿಂದು ಬಿಡಬೇಕು
,ತಂಗಳ ಮಾಡ್ಕೊಂಡು ತಿಂದ್ರೆ ಏನ್ ಮಜಾ ಇರುತ್ತೆ ಹೇಳಿ.

ಮದುವೆಯಾದ ಬಳಿಕ ಕೊಡಗಿನಲ್ಲಿ ವಾಸ ಮಾಡಲು ಶುರು ಮಾಡಿದ ನನಗೆ ತರ ತರದ ಮಾಂಸದ ಅಡುಗೆಗಳಿಗೆ ಹೆಸರಾಗಿರುವ ಕೊಡಗು ಸ್ವರ್ಗ ಸಮಾನವಾಗಿ ಹೋಗಿದೆ.ಆದರೆ ಕೊಡಗಿನಲ್ಲಿ ಪ್ರಸಿದ್ಧವಾದ ಕಡುಬು, ಪಂದಿ ಕರಿ ನಾನು ತಿನ್ನಲಾರದ ನಿರಾಶೆ ನನಗಿದೆ.ಯಾಕೆಂದರೆ ನಮ್ಮ ಮನೆದೇವರಿಗೆ ಹಂದಿ ಮಾಂಸ ಆಗಿ ಬರೋದಿಲ್ಲವಂತೆ.ವಿಚಿತ್ರವೆಂದರೆ ಇದು ಮನೆ ಹೆಂಗಸರಿಗೆ ಮಾತ್ರ ಅನ್ವಯ, ಗಂಡಸರಿಗೆ ಏನೂ ಕಟ್ಟಿಲ್ಲವಂತೆ,ಹಾಗಾಗಿ ಮನೆಯಲ್ಲಿ ನಾನು ಮಾಡುವಂತಿಲ್ಲವಾದ್ದರಿಂದ ,ಹೊರಗೆ ಮದುವೆ ಮನೆಗಳಲ್ಲಿ,ಸ್ನೇಹಿತರ ಮನೆಗಳಲ್ಲಿ ಪೋರ್ಕ್ ಮಾಡಿದಾಗ ನನ್ನ ಗಂಡ ಮಕ್ಕಳು ಚಪ್ಪರಿಸಿಕೊಂಡು ತಿನ್ನುವಾಗ ,ನಾನು ಕಷ್ಟಪಟ್ಟು ಬಾಯಿ ನೀರು ನುಂಗಿಕೊಂಡು ಸುಮ್ಮ ನಾಗುತ್ತೇನೆ.

ಬೇರೆ ಸಸ್ಯಾಹಾರ ದ ಅಡುಗೆಗಳಿಗೆ ಹೋಲಿಸಿದರೆ ಮಾಂಸದೂಟ,ತಯಾರಿಸಲು ಕೂಡ ಬಹಳ ಸುಲಭ.ಹೆಚ್ಚು ಕಡಿಮೆ ಎಲ್ಲ ವಿಧದ ಮಾಂಸಾಹಾರದ ಅಡುಗೆಗಳಿಗೂ ಅದೇ ಈರುಳ್ಳಿ,ಬೆಳ್ಳುಳ್ಳಿ,ಶುಂಠಿ,ಕರಿಮೆಣಸು,ಹಸಿಮೆಣಸು,ಗರಂ ಮಸಾಲ, ಮೆಣಸಿನಕಾಯಿ ಪುಡಿ, ಧನಿಯಪುಡಿ ಇವಿದ್ದರೆ ಸಾಕು.ಬೇರೆ ಬೇರೆ ಅಡುಗೆಗೆ ಸ್ವಲ್ಪ ಮಸಾಲೆಗಳ ಅನುಪಾತ ಹೆಚ್ಚು ಕಮ್ಮಿ ಮಾಡಿಕೊಂಡರೆ ಸಾಕು.ಕೆಲವೊಂದು ಅಡಿಗೆಗೆ ಇನ್ನೊಂದೆರಡು ಮೂರು ಬೇರೆ ಏನಾದ್ರೂ ಸಾಮಗ್ರಿ ಬೇಕಾಗಬಹುದು ಅಷ್ಟೇ.ಇಲ್ಲದೆ ಹೋದರೆ ಮಾಡುವ ವಿಧಾನ ದಲ್ಲಿ,ಹುರಿಯುವುದು, ಕರಿಯುವುದೂ, ಬಾಡಿಸುವುದು,ಬೇಯಿಸುವುದು,ಸುಡುವುದು,ಬೇಕಾದ ಹಾಗೆ ಮಾಡಿಕೊಂಡರಾಯಿತು ಅಷ್ಟೇ.ಕಡಿಮೆ ಸಮಯದಲ್ಲಿ ರುಚಿಕರ ಅಡುಗೆ ಸಿದ್ದವಾಗಿ ಬಿಡುತ್ತದೆ.

ಇನ್ನು ನೆಂಟರು ಬಂದಾಗ ಸಸ್ಯಾಹಾರದ ಅಡುಗೆ ಮಾಡುವುದುಎಂದರೆ ತರ ತರದ ವ್ಯಂಜನ,ಸಿಹಿ ಎಲ್ಲಾ ಮಾಡಬೇಕು.ಬರಿ ಅನ್ನ ಸಾರು ಬಡಿಸಿ ಕಳಿಸಲು ಸಾಧ್ಯವೇ?
ಒಂದು ಪಾಯಸ,ಪಲ್ಯ, ಹಪ್ಪಳ,ಉಪ್ಪಿನಕಾಯಿ,ಮೊಸರು ಗೊಜ್ಜು,ಕೋಸಂಬರಿ ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಅದೇ ಬಾಡೂಟ ಆದರೆ ಒಂದು ತುಪ್ಪದನ್ನ ದ ಜೊತೆಗೆ ಒಂದು ಚಿಕನ್ ಗೊಜ್ಜು ಮಾಡಿ ಬಿಟ್ಟರೆ ಆಯಿತು ,ಬಂದಿರುವ ನೆಂಟರು ತೃಪ್ತಿಯಿಂದ ಉಂಡು ತಿಂದು ಹೋಗುತ್ತಾರೆ.ಪಾಯಸ ಗೀಯಸ ಅಂತ ಏನೂ ಬೇಡ.
ಮಟನ್ ಸಾರು ಜೊತೆಗೆ ರಾಗಿ ಮುದ್ದೆ ಅನ್ನ ಮಾಡಿದರೆ ಆಯಿತು.ಎರಡು ಮುದ್ದೆ ಒಂದು ತಟ್ಟೆ ಅನ್ನ ಸಲೀಸಾಗಿ ಒಳ ಹೋಗುತ್ತದೆ.ಮತ್ತೆ ಮೀನು ಪ್ರಿಯರಿಗಂತೋ ಹಸಿಮೀನು ಸಿಗದ ದಿನಒಂದು ಹುರಿದ ಒಣಮೀನಿನ ತುಂಡು ಸಿಕ್ಕರೂ ಸಾಕು,ಅದರ ಗಮದಲ್ಲೇ ಒಂದು ಬೋಸಿ ಅನ್ನ ಖಾಲಿ ಯಾಗದಿದ್ದರೆ ಹೇಳಿ.

ನಮ್ಮ ಕಡೆಯಂತೂ ತರ ತರದ ಮಾಂಸದ ಅಡುಗೆ ಕಲಿತವರು ಬಳಗದಲ್ಲಿ ಯಾರಾದರೂ ಇದ್ದರೆ, ಕಾರ್ಯಗಳಲ್ಲಿ ಅವರಿಗೆ ಇರುವಷ್ಟು ಡಿಮ್ಯಾಂಡ್ ಇನ್ಯಾರಿಗೂ ಇರದು.ನನ್ನ ಗೆಳತಿ ಉಷಾ ಮಾಡುವ ಬಿರಿಯಾನಿ ಯ ರುಚಿ ಯಾವ ಮಿಚೆಲಿನ್ ಸ್ಟಾರ್ ಪಡೆದ ಶೆಫ್ ನ ರೆಸಿಪಿಗೂ ಬರಲಾರದು.ನನ್ನ ಮಕ್ಕಳ ಪ್ರಕಾರವಂತೂ ಅವರನ್ನು ಅಡಿಗೆ ಯಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.ಅವರ ಬಳಗಗಳ ಕಡೆ ಕಾರ್ಯ ಗಳಾದಾಗ ಅವರನ್ನು ಕರೆಸಿ ಕೊಂಡು ಬಿರಿಯಾನಿ ಹದ ಹೇಳಿಸಿ ಕೊಂಡವರಿಗೆ ಲೆಕ್ಕವಿಲ್ಲ.

ನಾನು ಮಾಂಸದಡಿಗೆ ಯಲ್ಲಿ ಅವರಷ್ಟು ಪರಿಣಿತಿ ಸಾಧಿಸ ದಿದ್ದರೂ "ಏನೋ ಪರವಾಗಿಲ್ಲ" ಅಂತ ಹೇಳುತ್ತಲೇ ನನ್ನ ಗಂಡ ಮಕ್ಕಳು ಮಾಡಿದ ಅಡುಗೆ ಎಲ್ಲಾ ಖಾಲಿ ಮಾಡುತ್ತಾರೆ.ಹಾಗಂತ ಮಾಂಸದ ಅಡುಗೆ ಇಷ್ಟ ಅಂತ ದಿನವೂ ಏನೂ ಮಾಡೋ ಹಾಗಿಲ್ಲ. ಏಕೆಂದರೆ ಪರಮ ದೈವ ಭಕ್ತ ರಾದ ನನ್ನ ಪತಿ ದೇವರಿಗೆ  ವಾರದ  ಏಳು  ದಿನಗಳಲ್ಲಿ  ಕನಿಷ್ಟ ನಾಲ್ಕು ದಿನವಾದರೂ  ದೇವರ ವಾರಗಳು ಬರುತ್ತವೆ.ಸೋಮವಾರ,ಶುಕ್ರವಾರ,ಗುರುವಾರ ಮತ್ತು ಶನಿವಾರ ಗಳಂದು ಬೇರೆ ಬೇರೆ ದೇವರುಗಳ ವಾರವಾದ್ದರಿಂದ ನಾನ್ ವೆಜ್ ಇಲ್ಲ ಅಂದ್ರೆ ಇಲ್ಲಾ. ಇನ್ನು ಮಂಗಳವಾರ ಅಮ್ಮನ ವಾರ ಅವತ್ತೂ ಇಲ್ಲ . ಇನ್ನು ಬುಧವಾರ ವಾರದ ಮಧ್ಯದ ದಿನ ಹಾಗಾಗಿ ಅವತ್ತು ಮಾರ್ಕೆಟ್ ನಿಂದಾ ಚಿಕನ್ ಮಟನ್ ತಂದು ಅಡಿಗೆ ಮಾಡುವಷ್ಟು ಪುರುಸೊತ್ತು ಮನೇಲಿ ಯಾರಿಗೂ ಇಲ್ಲ ಹಾಗಾಗಿ ಭಾನುವಾರವೇ ಬಾಡೂಟಕ್ಕೇ ಸರಿ.
ಅದೂ ಅಲ್ಲದೆ ಕೆಲವು ಪಂಗಡಗಳಲ್ಲಿ ಪ್ರತೀ ವರ್ಷ ಶ್ರಾವಣ ,ಕಾರ್ತಿಕ ಮಾಸಗಳಲ್ಲಿ ಜನ ನಾನ್ ವೆಜ್ ತಿನ್ನೋದಿಲ್ಲ.ಪುಣ್ಯಕ್ಕೆ ನಮ್ಮ ಮನೆಯಲ್ಲಿ ಈ ಅಭ್ಯಾಸ ಇಲ್ಲ.ಇಲ್ಲದಿದ್ದರೆ ತಿಂಗಳು ಗಟ್ಟಲೆ ಮೂಳೆ ಕಡಿಯದೆ ಇದ್ದರೆ ನನ್ನ ಪಾಡು ಏನಾಗಬೇಕು.

ನನ್ನ ಗಂಡನ ಪ್ರಕಾರ"ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು .ಇಲ್ಲದಿದ್ದರೆ  ನಿಮ್ಮವ್ವ ತಿನ್ನುವ ಪ್ರಮಾಣಕ್ಕೆಭೂಮಿ ಮೇಲೆ ಯಾವ ಪ್ರಾಣಿ ಪಕ್ಷಿ ಗಳಿಗೂ ಉಳಿಗಾಲವಿರುತ್ತಿರಲಿಲ್ಲ ಕಣ್ರೋ ಹುಡುಗ್ರ"ಅಂತ ಮಕ್ಕಳ ಜೊತೆ ಸೇರಿಕೊಂಡು ನನ್ನನ್ನು ಆಡಿಕೊಳ್ಳುತ್ತಾರೆ. 


ಯಾರು ಎಷ್ಟೇ ನನ್ನ ಬಾಯಿ ರುಚಿ ಬಗ್ಗೆ ಆಡಿಕೊಂ ಡರೂ,ನನ್ನಂತೆಯೇ ಸಮಾನ ಬಾಯಿರುಚಿಯವರ ಪ್ರೋತ್ಸಾಹ ಗಳೆ ನನಗೆ ಈ ಅಣಕ ,ಕುಹಕ ಗಳನ್ನೆಲ್ಲಾಎದುರಿಸಿ ನಿಲ್ಲುವ ತಾಕತ್ ಕೊಟ್ಟಿವೆ.ಅಂತಹ ನನ್ನ ಒಬ್ಬರು ಸಂಬಂಧಿಕರಿಗೆ ದಿನವೂ ಊಟದ ಜೊತೆಗೆ ಏನಾದರೂ ಒಂದು ತರಹದ ನಾನ್ ವೆಜ್ ಖಾದ್ಯ ಬೇಕೆ ಬೇಕು.ಏನೂ ಇಲ್ಲದಿದ್ದರೆ ಎರಡು ಮೊಟ್ಟೆಯಾದರೂ ಅವ್ರ ಹೆಂಡತಿ ಹುರಿದು ಕೊಡದೇ ಹೋದರೆ ಅವರಿಗೆ ಒಂದು ಗುಕ್ಕು ಕೂಡ ಅನ್ನ ಗಂಟಲ್ಲಿಂದ ಕೆಳಗಿಳಿಯದು.ಹಾಗೆ ಸುಖವಾಗಿ ತಿಂದು ಉಣ್ಣುವ ಜನವಾದ್ದರಿಂದ ನೋಡಲು ಕೂಡ ಗಟ್ಟಿಮುಟ್ಟಾಗಿ ಚೆನ್ನಾಗಿದ್ದಾರೆ.ಆದರೆ ಪಾಪ ಒಮ್ಮೆ ಅವರಿಗೆ ಒಂದು ಚಿಕ್ಕ ಅಪಘಾತ ವಾಗಿ ಕಾಲು ಮುರಿದು ಹೋಗಿ,ಇಷ್ಟು ದಪ್ಪದ ಪ್ಲಾಸ್ಟರ್ ಹಾಕಿದ ಕಾಲಿನಲ್ಲಿ ಮಂಚಕ್ಕೇ ಕಟ್ಟು ಬಿದ್ದು ವಾರಗಟ್ಟಲೆ ಮನೆಯಲ್ಲೇ ಕಾಲ ಕಳೆಯ ಬೇಕಾಗಿ ಬಂದು ಬಿಟ್ಟಿತು.ದುರ್ಭಿಕ್ಷ ದಲ್ಲಿ ಅಧಿಕ ಮಾಸ ಎಂಬಂತೆ ಹಲ್ಲು ನೋವು ಕೂಡ ವಕ್ಕರಿಸಿ ಕಾಲಿನ ಜೊತೆ ವಸಡು ಕೂಡ ಊದಿಕೊಂಡು ಪಾಪ ಅವರ ಪಾಡು ಹೇಳತೀರದು.ಸರಿ ಖಾಯಿಲೆ ಮನುಷ್ಯ ನೋಡಿ ಮಾತನಾಡಿಸಿಕೊಂಡು ಬರೋಣ
ಎಂದು ನಾನು ನನ್ನ ಗಂಡ ಹೋಗಿ ನಾಲ್ಕು ಸಮಾಧಾನದ ಮಾತು ಹೇಳಿ ದಾಗ,ಆತ"ಅಯ್ಯೋ ನನ್ನ ಪಾಡು ಯಾವ ನನ್ನ ಶತ್ರುಗೂ ಬರಬಾರದು,ಈ ಕಾಲುನೋವು ಹೇಗೋ ತಡಕೊಂಡೆ,ಈ ಹಾಳುಗರಿ ಹಲ್ಲುನೋವು ಕಾಟ ತಡಿಯೋಕೆ ಆಗ್ತಿಲ್ಲ,ಒಂದು ವಾರ ಆಯಿತು ಸರಿಯಾಗಿ ಊಟಾ ಮಾಡಿ,ಒಂದು ಮೂಳೆ ಕೂಡ ಕಡಿದಿಲ್ಲ,ಯಾರಾದ್ರೂ ಊಟಾ ಮಾಡಬೇಕಾದ್ರೆ ಎಷ್ಟು ದುಕ್ಕಾ ಆಗುತ್ತೆ ಗೊತ್ತಾ"ಎನ್ನುವಷ್ಟರಲ್ಲಿ ಅವರ ಕಣ್ಣುಗಳಲ್ಲಿ ನೀರೇ ಸುರಿದು ಹೋಯಿತು.ಅವರ ಅಳು ನೋಡಿ ನನಗೆ ಸಹಾನುಭೂತಿ ಉಕ್ಕಿ ಬಂದು"ಒಂಚೂರು ಕಾಲು ಸೂಪು ಆದ್ರೂ ಮಾಡಿಸಿಕೊಂಡು ಕುಡೀರಿ" ಅಂತ ಧೈರ್ಯ ಹೇಳಿ ಬಂದೆ.

ಅಲ್ಲಾ ಇರೋದೊಂದು ಜೀವನ, ಚೆನ್ನಾಗಿ ಉಂಡು ತಿಂದು ತೇಗಿ ತೃಪ್ತಿಯಾಗುವಂತಹ ಬಾಳು ಬಾಳದಿದ್ದರೆ ಅದೂ ಒಂದು ಜೀವನವೇ ಹೇಳಿ.ಈಗಂತೂ ಮುಂಚಿನ ಹಾಗೆ ಬರಿ ಸಾರು,ಗೊಜ್ಜು,ಬಿರಿಯಾನಿಗಳಲ್ಲದೆ ನೂರೆಂಟು ಥರಹದ ನಾನ್ ವೆಜ್ ಅಡುಗೆ ಗಳ ರೆಸಿಪಿಗಳು ಅಂತರ್ಜಾಲದಲ್ಲಿ ಲಭ್ಯವಿದ್ದು,ಸ್ಮಾರ್ಟ್ ಫೋನ್ ನಿಂದಾಗಿ ಬೆರಳ ತುದಿಗೆ ನಿಲುಕು ತ್ತಿರುವಾಗ,ಅವೆಲ್ಲವನ್ನೂ ಸವಿಯದೇ ಹೋದರೆ ಬದುಕು ಸಾರ್ಥಕ ವಾಗುವುದೆ ನೀವೇ ಹೇಳಿ?ಹಾಗಾಗಿ ಭಾನುವಾರದ ಬಾಡೂಟ ಸವಿಯುತ್ತ ,ಗಂಡ ಮಕ್ಕಳ ಅಣಕಗಳಿಗೆ ಕಿವುಡಾಗಿ ನನ್ನ ಜೀವನ ಈಗ ರಸಮಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ

 ಉಪ್ಪಿನ ಕಾಯಿಗೆ ಒಂಚೂರು ಅನ್ನ..   "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...