ಸಾವಿನ ಮನೆಯ ಹಾಡುಗಾರರು
ಸಾವು ಎಂದರೆ ಹೆದರದೆ ಇರುವವರು ಯಾರು? ಮಾನವ ಎಷ್ಟೇ ನಿಸರ್ಗದ ನಿಗೂಢ ರಹಸ್ಯಗಳನ್ನು ಭೇದಿಸಿರುವ ನಾದರೂ ಸಾವಿನ ನಿಗೂಢತೆ ಆತನ ಅರಿವಿನ ಆಚೆಗಿನ ಬುದ್ಧಿಗೆಟಕದ ರಹಸ್ಯವಾಗಿಯೇ ಉಳಿದುಬಿಟ್ಟಿದೆ.
ನಮ್ಮ ಮೂಡು ಸೀಮೆಯ ಕಡೆ ಒಂದು ಗಾದೆ ಹೇಳುತ್ತಾರೆ" ಸತ್ತವರ ತಿಕ ಅತ್ಲಾಗೋ ಇತ್ಲಾಗೋ, ಏನಾದರೇನು",ಅಂತ. ಅಂದರೆ ಸತ್ತ ನಂತರ ಆ ವ್ಯಕ್ತಿಯ ಭೌತ ಶರೀರಕ್ಕೆ ಸಿಗುವ ಬೆಲೆ ಅಷ್ಟೇ ಎಂದು.
ಒಬ್ಬ ವ್ಯಕ್ತಿ ಭೌತಿಕವಾಗಿ ಇಲ್ಲವಾದರೂ ಅವರೊಂದಿಗೆ ಭಾವನಾತ್ಮಕ ಬೆಸುಗೆಯಲ್ಲಿ ಬಂಧಿಸಲ್ಪಟ್ಟವರು ಅನುಭವಿಸುವ ನೋವು ಅಳತೆಗೆ ಸಿಗಲಾರದಂತಹದ್ದು. ಚೆನ್ನಾಗಿ ಬದುಕಿ ಬಾಳಿ ಮುಪ್ಪಿನಲ್ಲಿ ತೀರಿ ಹೋದವರ ಸಾವು ದುಃಖ ತಂದರೂ "ಅಯ್ಯೋ, ಅವರಷ್ಟೇ ಬದ್ಕನ ತಗೋ" ಎಂದು ಸಮಾಧಾನ ತಂದುಕೊಂಡು, ನಿರಾಳವಾಗಿ ಮುಂದಿನ ಕಾರ್ಯಗಳ ಕಡೆಗೆ ಗಮನಹರಿಸುತ್ತಾರೆ.ಆದರೆ ಅಲ್ಪಾಯುಷ್ಯದಲ್ಲೇ ಯಾರಾದರೂ ತೀರಿಹೋದರೆ ನೋವು ಭರಿಸುವುದು ಕಷ್ಟ ಸಾಧ್ಯ. ಬರಿಸಲಾಗದ ನೋವನ್ನು ಜನ ವ್ಯಕ್ತಪಡಿಸುವ ಬಗೆಯೂ ಬೇರೆ ಬೇರೆ ಸ್ವರೂಪದಲ್ಲಿರುತ್ತದೆ. ನಗರಗಳಲ್ಲಿ ಸಾವಿನ ಮನೆಯಲ್ಲಿ ದುಃಖ ಅಷ್ಟು ಎದ್ದುಕಾಣುವ ಮಟ್ಟಕ್ಕೆ ವ್ಯಕ್ತವಾಗುವುದು ಕಾಣಸಿಗದು. ಮೌನವಾಗಿ ರೋಧಿಸಿ ,ಸಂಕಟಪಟ್ಟು, ದುಃಖ ನುಂಗುವ ಜನರೇ ಜಾಸ್ತಿ ಆದರೆ ನಮ್ಮ ಊರಿನ ಕಡೆಗಳಲ್ಲಿ ಸಾವಿನ ಮನೆಯಲ್ಲಿ ಶೋಕಾಚರಣೆಯ ಬಗೆಯೇ ಬೇರೆ.
ಚಿಕ್ಕಂದಿನಿಂದ ಕಂಡಂತೆ ಯಾರದಾದರೂ ಮನೆಯಲ್ಲಿ ಸಾವು ಉಂಟಾದರೆ, ಅವರ ನೆಂಟರಿಷ್ಟರೆಲ್ಲ ಮೃತರ ಸುತ್ತ ಕುಳಿತು ಹಾಡಲಾರಂಭಿಸುತ್ತಾರೆ. ಹಾಡುವುದು ಎಂದರೆ ರಾಗ ,ತಾಳ ಬದ್ಧ ಗಾನವಲ್ಲ. ಆ ವ್ಯಕ್ತಿಯ ಗುಣಗಾನ ಮಾಡುತ್ತಾ ಆಡು ಮಾತುಗಳನ್ನು ಹಾಡಿನ ರೂಪದಲ್ಲಿ ಹೇಳುತ್ತಾರೆ .ಪ್ರತಿ ಸಾಲಿನ ಕೊನೆಯಲ್ಲಿ ಬರುವ ಅಕ್ಷರವನ್ನು ಚೆನ್ನಾಗಿ ರಾಗವಾಗಿ ಎಳೆದರೆ ಆಯ್ತು ,ಅದು ಹಾಡಿನಂತೆಯೇ ಕೇಳಿಸುತ್ತದೆ. ಕೇಳುವವರ ಮನಸ್ಸು ಕಲಕಿ ಎಂತಹ ಕಲ್ಲೆದೆಯೂ ಕರಗಬೇಕು ಹಾಗೆ ರೋಧಿಸಿಕೊಂಡು ಹಾಡುವವರು ಇರುತ್ತಾರೆ. ಆದರೆ ಕೆಲವು ಬಾರಿ ಈ ಹಾಡುಗಾರರ ಮಾತುಗಳು ವಿಚಿತ್ರವಾಗಿ ,ಸಂದರ್ಭಕ್ಕೆ ಸರಿಯಾಗಿ ಹೊಂದಿಕೊಳ್ಳದೆ, ಕೇಳುವವರನ್ನು ಎಂತಹ ಶೋಕದ ಸಂದರ್ಭದಲ್ಲೂ ನಗು ಉಕ್ಕಿ ಬರುವ ಮುಜುಗರಕ್ಕೆ ಸಿಲುಕಿಸಿರುವುದೂ ಇದೆ.
ನನಗಂತೂ ಸಾವಿನ ಮನೆಗೆ ಹೋಗುವುದೆಂದರೆ ಸ್ವಲ್ಪ ಹಿಂಜರಿಕೆ. ಅಲ್ಲಿ ನಿರ್ಮಿಸಲಾಗುವ ಶೋಕಾಚರಣೆಯ ಭಯದ ವಾತಾವರಣಕ್ಕಿಂತ ಹೆಚ್ಚಾಗಿ, ಹಾಡುಗಾರರ ಹಾಡು ಕೇಳಿ ನನಗೆ ನಗೆಯುಕ್ಕಿ ಬಂದರೆ ಏನು ಗತಿ, ಎನ್ನುವ ಭಯವೇ ಹೆಚ್ಚು. ಅಂತಹ ಎಡವಟ್ಟಿನ ಪ್ರಸಂಗಗಳಲ್ಲಿ ಸಾಕಷ್ಟು ಬಾರಿ ಸಿಲುಕಿಕೊಂಡಿರುವುದೂ ಇದೆ.
ಒಮ್ಮೆ ಹೀಗೆ ನಮ್ಮ ಹತ್ತಿರದ ಸಂಬಂಧದ ಒಬ್ಬರು ತಾತ ತೀರಿಕೊಂಡಿದ್ದರು .ತೊಂಬತ್ತಾರುವರ್ಷ ಚೆನ್ನಾಗಿ ಬಾಳಿ ಬದುಕಿ ಗಟ್ಟಿಮುಟ್ಟಾಗಿ, ಓಡಾಡಿಕೊಂಡಿದ್ದ ತಾತ ರಾತ್ರಿ ಮಲಗಿದ್ದವ ರು ಮೇಲೆದ್ದಿರಲಿಲ್ಲ. ಜನರೇ ಹೇಳುವಂತೆ"ಪುಣ್ಯದ ,ಸುಖದ ಸಾವು"ಸರಿ, ಸಾವಿಗೆ ಹೋಗಿ, ಅಲ್ಲಿ ನೆಂಟರಿಷ್ಟರ ಮಧ್ಯೆ ಕುಳಿತು ,ಏನು, ಎತ್ತ ,ಎಂದೆಲ್ಲಾ ವಿಚಾರಿಸಿ, ಒಂದೆರಡು ನಿಟ್ಟುಸಿರುಬಿಟ್ಟು ,ಕಣ್ಣು ಮೂಗು ಒರೆಸಿಕೊಳ್ಳುವಷ್ಟರಲ್ಲಿ ಹಾಡುಗಾರರ ಹಾಡು ಪ್ರಾರಂಭವಾಯಿತು. ತಾತನ ಹೆಣ್ಣುಮಕ್ಕಳೇ ಒಂದು ಗುಂಪು, ಸೊಸೆಯರದೆ ಒಂದು ಗುಂಪು ಪೈಪೋಟಿ ಮೇಲೆ ಹಾಡ್ತಾ ಇತ್ತು. ತಾತ ಕೊನೆಗಾಲದಲ್ಲಿ ಸೊಸೆಯೊಂದಿಗೆ ಜಗಳ ಮಾಡಿಕೊಂಡು ಹೆಣ್ಣುಮಕ್ಕಳ ಮನೆಗೆ ಹೋಗಿ ಅಲ್ಲೇ ಒಬ್ಬಳ ಮನೆಯಲ್ಲಿ ತೀರಿಕೊಂಡಿದ್ದರು. ಇದೆಲ್ಲವೂ ಎರಡು ಪಂಗಡಗಳ ಹಾಡುಗಾರಿಕೆಯಲ್ಲಿಯೇತಿಳಿದಿದ್ದು.
ಒಬ್ಬ ಮೊಮ್ಮಗಳು" ಅಯ್ಯೋ ಓ ಓ ಓ ಓ ಇನ್ಯಾರಿಗ್ ಬಿಪಿ ಮಾತ್ರೆ ತರ್ಲಿ ಈಈಈ ಇನ್ಯಾರನ್ನ ಇನ್ಯಾರನ್ನ ತಾತ ಅಂತ ಕರಿಲಿ ಈಈಈಈೇ"ಎಂದು ಹಾಡಲಾರಂಭಿಸಿದಳು. ಅವಳ ಹಾಡಿಗೆ ದನಿಗೂಡಿಸಿದ ಅವರವ್ವ "ಅಯ್ಯೋ ಸೊಸೆ ಅನ್ನುಸ್ಕೊಂಡ್ ಮುಂಡೇರು ಯಾರೂಕೊನೆಗಾಲದಲ್ ಆಗ್ನಿಲ್ಲಾಾ, ಬರೀ ತಿನ್ನಕ್ ಮಾತ್ರ ನಿನ್ನ ಆಸ್ತಿ ಬೇಕಾ ಈ ಮುಂಡೆರ್ಗೆ ಎಯೆಯೇ "ಎಂದು ರಾಗವಾಗಿ ಆಲಾಪಿಸಲಾರಂಭಿಸಿದಳು. ಇನ್ನು ಕೇಳಿಸಿಕೊಂಡ ಸೊಸೆಯರು ಸುಮ್ಮನಿದ್ದಾರೆಯೇ?" ಮನೆಗೆ ಹೋದ ಎ ರ್ಡು ದಿನ್ಕೇ ನಿನ್ನ ಸಾಯಿಸಿ ಬಿಟ್ರಲ್ಲಪ್ಪಾ, ವರ್ಷಗಟ್ಟಲೆ ನಿನ್ನ ನೋಡಿದೋರ್ ಮನೆಯಲ್ಲಿ ನೀನಿದ್ದಿದ್ರೆ ಇನ್ನೂ ಇರ್ತಿದ್ಯಲ್ಲಪ್ಪಾ.. ಸರಿಯಾಗ್ ನಿಗಾ ನೋಡ್ದೆ ಈ ಮುಂಡೆರ್ ಎರಡ್ ದಿನಕ್ಕೆ ನಿನ್ನ ಕಳಿಸ್ ಬುಟ್ರಲ್ಲಪ್ಪಾ ಆ ಆಆಆ"ಎಂದು ಒರಲಲಾರಂಭಿಸಿದರು. ಹೀಗೆ ಪರಸ್ಪರ ಸೊಸೆ, ಹೆಣ್ಣುಮಕ್ಕಳ ಹಾಡ್ ಯುದ್ಧ ನಡೆಯುತ್ತಿದ್ದಾಗ ನನಗೆ ನಗೆ ಉಕ್ಕಿ ಉಕ್ಕಿ ಬರಲಾರಂಭಿಸಿತು. ಇನ್ನು ನಕ್ಕರೆ ನನಗೆ ಅಲ್ಲಿ ಉಳಿಗಾಲ ಉಂಟೆ !ಅಂತೂ ತಲೆತಗ್ಗಿಸಿ, ತಲೆತುಂಬಾ ಸೆರಗು ಹೊದ್ದು ಕುಳಿತಿದ್ದಾಯಿತು.
ಅಷ್ಟರಲ್ಲಿ ಹತ್ತಿರ ಬಂದ ನನ್ನ ಚಿಕ್ಕಮ್ಮ"ಬಾ ಇಲ್ಲಿ"ಎಂದು ಹಿತ್ತಲಿಗೆ ಕರೆದುಕೊಂಡು ಹೋಗಿ"ಇನ್ನು ನೀನು ಇಲ್ಲಿಂದ ಹೊರಡು, ನೀನು ಕಷ್ಟಪಡುವುದು ನಾನು ನೋಡ್ತಾ ಇದೀನಿ .ಇನ್ನು ನಿನ್ನ ನೋಡಿ ನನಗೆ ನಗೆ ಬಂದರೆ ಅಷ್ಟೇ, ನನ್ ಗಂಡ ಸರಿಯಾಗಿ ಗ್ರಹಚಾರ ಬಿಡಿಸುತ್ತಾರೆ"ಎಂದು ಹಿತ್ತಲಿನಿಂದಲೇ ಸಾಗ ಹಾಕಿದರು.
ನನ್ನ ಹಾಗೆ ನನ್ನ ಚಿಕ್ಕಮ್ಮನಿಗೂ ನಗು ತಡೆಯುವುದು ಸ್ವಲ್ಪ ಕಷ್ಟವೇ. ಅವರು ಕೂಡ ಒಮ್ಮೆ ಇಂತಹ ಪ್ರಸಂಗದಲ್ಲಿ ಸಿಲುಕಿಕೊಂಡು ಬಿಟ್ಟಿದ್ದು ಈಗಲೂ ನೆನಪಾದಾಗಲೆಲ್ಲ ಅವರಿಗೆ ನಗು ಉಕ್ಕಿ ಹರಿಯುತ್ತದೆ.
ನಮ್ಮ ಚಿಕ್ಕಮ್ಮನ ಮಾವನ ತಂದೆ ಶತಾಯುಷಿಯಾಗಿ ತೀರಿಕೊಂಡಿದ್ದರು. ಹಲವು ವರ್ಷಗಳು ಹಾಸಿಗೆ ಹಿಡಿದಿದ್ದು ನಂತರ ತೀರಿಕೊಂಡಿದ್ದು ಅವರಿಗೂ, ಅವರನ್ನು ನೋಡಿಕೊಳ್ಳುತ್ತಿದ್ದವರಿಗೂ, ಇಬ್ಬರಿಗೂ ಬಿಡುಗಡೆಯೇ ಸರಿ. ಆದರೆ ಸಾವು ಸಾವೇ, ಹಾಗಾಗಿ ಅಳುವುದು ಕರೆಯುವುದು ಹಾಡುವುದು ಸಾಂಗವಾಗಿ ನಡೆದಿತ್ತು. ಅವರಲ್ಲಿ ಮಗಳು ಒಬ್ಬರು ತಂದೆಯ ತಲೆದಸಿಯಲ್ಲಿ ಕುಳಿತು"ಅಯ್ಯೋ ಅಪ್ಪ ಬುಟ್ಬುಟ್ಟು ಹೋದ್ ಯಲ್ಲಪ್ಪ, ಆ
ಆಆಆಆಆ"ಎಂದು ರಾಗವಾಗಿ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ನಿಲ್ಲಿಸಿ ಪಕ್ಕಕ್ಕೆ ತಿರುಗಿ ತನ್ನ ಮಗನಿಗೆ"ಲೋ, ಸತಿಗೆ ಹೂ ತರಕ್ಕೆ ಹೇಳಿದ್ದೆ ,ತಂದ್ನ ನೋಡು"ಎಂದು ಮಾಮೂಲಾಗಿ ಹೇಳಿ, ಮತ್ತೆ ತಿರುಗಿ ಅದೇ"ಅಪ್ಪಆಆಆಆ"ರಾಗಕ್ಕೆ ಮರಳಿದರು. ಒಂದೆರಡು ನಿಮಿಷದ ನಂತರ ಮತ್ತೆ ನಿಂತು ತನ್ನ ಗಂಡನಿಗೆ"ಇದ್ಯಾಕೆ, ಇಲ್ಲೇ ನಿಂತಿದೀರಿ ಇನ್ನೂ, ಹೋಗಿ ನೀರು ಕಾಯಿಸಕ್ಕೆ ಹೇಳಿ'ಅಂದು ಮತ್ತದೇ ರಾಗ. ಹೀಗೆ ಹಾಡು, ಮಾತು, ಹಾಡು, ಮಾತುಗಳು ನಡೆಯುತ್ತಿದ್ದಾಗ ನನ್ನ ಚಿಕ್ಕಮ್ಮನಿಗೆ ನಗೆ ತಡೆಯಲಾರದೆ"ಅಲ್ಲಿಂದ ಎದ್ದುಹೋಗಿ, ಹಿತ್ತಲಿನಲ್ಲಿ ಯಾರು ಇಲ್ಲದ ಜಾಗದಲ್ಲಿ ಚೆನ್ನಾಗಿ ನಕ್ಕು ಕಣ್ಣೊರೆಸಿಕೊಂಡು ಬಂದೆ ಕಣೆ"ಎಂದು ಹೇಳಿ ನನ್ನನ್ನು ನಗಿಸಿದರು.
ಇನ್ನು ಇನ್ನೊಬ್ಬ ತಾತ ಪಾರ್ಶ್ವವಾಯುವಿನಿಂದ ಹಲವಾರು ವರ್ಷ ಹಾಸಿಗೆ ಹಿಡಿದಿದ್ದು ನಂತರ ತೀರಿಕೊಂಡಿದ್ದರು .ಆತನ ಹೆಂಡತಿ ನಮ್ಮಜ್ಜಿ ಅಪಾರ ಹಾಸ್ಯಪ್ರಜ್ಞೆಯ ಸದಾ ಹಸನ್ಮುಖಿ. ಜೀವನದಲ್ಲಿ ಎಂತಹ ಕಷ್ಟ ಬಂದಿದ್ದರೂ ದೃತಿಗೆಡದೆ ನಿಭಾಯಿಸಿದ ಗಟ್ಟಿಗಿತ್ತಿ. ಗಂಡನ ಸಾವನ್ನು ಸಂಯಮದಿಂದ ಒಪ್ಪಿಕೊಂಡು ಮೌನವಾಗಿ ಕುಳಿತಿದ್ದರು. ಆದರವರ ಹೆಣ್ಣು ಗಂಡು ಮಕ್ಕಳೆಲ್ಲಾ ಚೆನ್ನಾಗಿ ರೋಧಿಸಿ, ಹಾಡಿದ್ದೇ ಹಾಡಿದ್ದು. ಅಜ್ಜಿ ಕೇಳೋ ಗಂಟ ಕೇಳಿ ಕೊನೆಗೆ ರೋಸಿಹೋಗಿ"ಹೋದೊರ್ ಚೆನ್ನಾಗಿ ಬದುಕಿ ಬಾಳಿ ಹೋದ್ರು, ನೀವೆಲ್ಲ ಹಾಡಿದ್ರೆ ಬಂದ್ ಬುಟ್ಟಾರ, ಸುಮ್ನಿರ್ರಪ್ಪ, ಕೇಳೋಕಾಕ್ಕಿಲ್ಲ"ಎಂದು ಶೋಕಾಚರಣೆ ಗೊಂದು ಬ್ರೇಕ್ ಹಾಕಿಸಿದರು.
ನನ್ನ ಕಸಿನ್ ಒಬ್ಬಳ ಗಂಡ ಪಾಪ ಅರ್ಧ ಆಯುಸ್ಸಿನಲ್ಲಿ ತೀರಿಕೊಂಡು ತನ್ನವರನ್ನೆಲ್ಲ ಅಪಾರ ಶೋಕದಲ್ಲಿ ಮುಳುಗಿಸಿ ಹೋದರು. ಅವಳಂತೂ ಗರಬಡಿದವರಂತೆ ಮಾತೇ ಹೊರಡದೆ ಮೌನವಾಗಿ ಶೋಕಿಸುತ್ತಾ, ಕಣ್ಣೀರು ಸುರಿಸುತ್ತಾ ಕುಳಿತಿದ್ದಳು. ಅದಾದ ಸ್ವಲ್ಪ ದಿನಗಳ ನಂತರ ಅವಳ ಹಳ್ಳಿಯ ಜನ ಹಂಗೂ ಆಡಿಕೊಂಡರಂತೆ,"ಆವೆಣ್ಣು ವಸಿನಾದ್ರೂ
ಹಾಡ್ಬಾರ್ದ"ಅಂತ.
ಅಂತೂ ಇತ್ತೀಚೆಗೆ ಬರಬರುತ್ತಾ ಸಾವಿನ ಮನೆಗೆ ಶೋಕಾಚರಣೆಯ ಹಾಡುಗಳು ಕೂಡ ಕಡಿಮೆಯಾಗುತ್ತಿದ್ದು ಜನ ಹೆಚ್ಚು ಹೆಚ್ಚು ಸಾಮಾಜಿಕ ಸಭ್ಯತೆ ಕಡೆಗೆ ಗಮನ ನೀಡುತ್ತಿದ್ದಾರೆ ಎನಿಸುತ್ತಿದೆ. ನಮ್ಮ ಚಿಕ್ಕಮ್ಮ ಒಬ್ಬರು ಮಾತ್ರ ಈಗಲೂ ಯಾರದಾದರೂ ಸಾವಿನ ಮನೆಯಲ್ಲಿ ಹಾಡ್ತಾರೆ. ನನ್ನಣ್ಣ ಅವರನ್ನು ರೇಗಿಸುವುದು ಉಂಟು."ಅಕ್ಕ ನೀನು ಸತ್ತಾಗ ನಾನು ಹಾಡ್ತೀನಿ ಬಿಡು, ಎಲ್ಲರೂ ಸತ್ತಾಗ ಹಾಡ್ತಿದ್ಯಲ್ಲೆ ಅಕ್ಕಾ, ಈಗ ನಿಂಗೆ ಹಾಡೋರೆ ಇಲ್ವಲ್ಲೇ ಅಕ್ಕಾ,ಅಂತ ಹಾಡ್ತಿನಿ"ಅಂದ್ರೆ ಅವರು "ಅಯ್ಯೋ ಮನೆಹಾಳ,ನೀನೊಬ್ಬನಾದ್ರು ನನ್ನ ಹೆಸ್ರು ಉಳಿಸು"ಎಂದು ಮನಸಾರೆ ನಗುತ್ತಾರೆ.
ಶನಿವಾರ, ಜುಲೈ 25, 2020
ಸಾವಿನ ಮನೆಯ ಹಾಡುಗಾರರು...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ
ಉಪ್ಪಿನ ಕಾಯಿಗೆ ಒಂಚೂರು ಅನ್ನ.. "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...
-
ಸಂಗಾತಿ ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ Toggle navigation Home ಬೇಲಿ ಬೇಲಿ July 29, 2020 ಅನುವಾದ ಅನುವಾದಿತ ಕವಿತೆ ಕನ್ನಡ ಮೂಲ: ಸುನೀತ ಕುಶಾಲನಗರ ಇಂಗ...
-
ಸುರಹೊನ್ನೆ ಲಹರಿ 17 ಕೋರೋನ ಕಾಲದ ಕೆಲ ಬಿಡಿ ಚಿತ್ರಗಳು. BY SAMATHA R, SAMATHAYUVARAJ02@GMAIL.COM · JULY 9, 2020 ನಾಗಲೋಟದಿಂದ ಓಡುತ್ತಿದ್ದ ಪ್ರಪಂಚವನ್ನ...
-
ಸುರಹೊನ್ನೆ ಲಹರಿ 22 ಮೊದಲ ಶಾಲೆಯ ನೆನೆಯುತ್ತಾ… BY SAMATHA R, SAMATHAYUVARAJ02@GMAIL.COM · JUNE 11, 2020 “ಅಮ್ಮ ಫೋನ್ ಕೊಡು,ಆನ್ಲೈನ್ ಕ್ಲಾಸ್ ಶುರುವಾಗು...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ